ಚಳಿನಾಡು ಕಾಶ್ಮೀರದಲ್ಲಿ ರಾಜಕೀಯ ಬಿಸಿ
ಮಂಜುಹೊದ್ದು ಮಲಗಿದ ಕಾಶ್ಮೀರ ಕಣಿವೆಯಲ್ಲಿ ಇದೀಗ ರಾಜಕೀಯ ಚಟುವಟಿಕೆಗಳು ಕಾವೇರಿಸಿವೆ. ಮುಖ್ಯಮಂತ್ರಿಯಾಗಿದ್ದ ಮುಫ್ತಿ ಮಹ್ಮದ್ ಸಯೀದ್ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ರಾಜಕೀಯ ಚತುರೆ ಎನಿಸಿಕೊಂಡ ಪುತ್ರಿ ಮೆಹಬೂಬಾ ಏರುವುದು ಖಚಿತವಾಗಿದ್ದರೂ, ಪಿಡಿಪಿ ಓಲೈಕೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಮುಂದಾಗಿವೆ.
ಸೋನಿಯಾ ಗಾಂಧಿ ಮೆಹಬೂಬಾ ಅವರನ್ನು ಭೇಟಿಯಾದ ಬೆನ್ನಲ್ಲೇ ಸಯೀದ್ ಕುಟುಂಬದ ಜತೆ ನಿಕಟ ಸಂಪರ್ಕ ಹೊಂದಿದ್ದ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಮುಫ್ತಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಪಿಡಿಗೆ ನೀಡಿದ ಬೆಂಬಲವನ್ನು ಮುಂದುವರಿಸಲು ಬಿಜೆಪಿ ಕೆಲ ಷರತ್ತುಗಳನ್ನು ವಿಧಿಸಿದೆ ಎಂಬ ವದಂತಿಗಳ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಸೋನಿಯಾಗಾಂಧಿ ಮುಫ್ತಿ ನಿವಾಸಕ್ಕೆ ಭೇಟಿ ನೀಡಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಮುಫ್ತಿಯವರ ನಾಲ್ಕನೇ ದಿನದ ವಿಧಿಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿರುವುದರಿಂದ ತಾವು ಭೇಟಿ ನೀಡಿರುವುದಾಗಿ ಗಡ್ಕರಿ ಹೇಳಿಕೊಂಡಿದ್ದಾರೆ.
ಮಹತ್ವದ ವಿಷಯಗಳ ಬಗ್ಗೆ ತಂದೆಗೆ ರಾಜಕೀಯ ಸಲಹೆ ನೀಡುತ್ತಿದ್ದ ಮೆಹಬೂಬ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದು ಕುತೂಹಲಕಾರಿ ಅಂಶವಾಗಿದೆ. 87 ಸದಸ್ಯಬಲದ ಕಾಶ್ಮೀರ ವಿಧಾನಸಭೆಯಲ್ಲಿ ಪಿಡಿಪಿ 28 ಹಾಗೂ ಬಿಜೆಪಿ 25 ಸ್ಥಾನಗಳನ್ನು ಹೊಂದಿವೆ. ನ್ಯಾಷನಲ್ ಕಾನ್ಫರೆನ್ಸ್ 15 ಹಾಗೂ ಕಾಂಗ್ರೆಸ್ 12 ಶಾಸಕರನ್ನು ಹೊಂದಿವೆ. ಸಿಪಿಎಂನ ಒಬ್ಬರು, ಇತರ ಪಕ್ಷಗಳ ಮೂವರು ಮತ್ತು ಮೂವರು ಪಕ್ಷೇತರರಿದ್ದಾರೆ.