×
Ad

ದ.ಕ. ಜಿಪಂಗೆ ರಾಜ್ಯದ ಅನುದಾನದ ಕೊರತೆ: ಅಧ್ಯಕ್ಷರ ಅಸಮಾಧಾನ

Update: 2016-01-11 12:54 IST

ಮಂಗಳೂರು: ದ.ಕ. ಜಿಲ್ಲಾ ಪಂಚಾಯತ್‌ನಲ್ಲಿ ಕಳೆದ ಐದು ವರ್ಷಗಳ ಆಡಳಿತಾವಧಿಯಲ್ಲಿ ತಾರತಮ್ಯ ಮಾಡದೆ ಎಲ್ಲಾ ಸದಸ್ಯರನ್ನು ಒಗ್ಗೂಡಿಸಿ ಅವರ ಸಹಕಾರದೊಂದಿಗೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ತೃಪ್ತಿ ಇದೆಯಾದರೂ, ಕಳೆದ ಎರಡು ವರ್ಷಗಳಿಂದ ರಾಜ್ಯ ಸರಕಾರದಿಂದ ನೀಡುವ ಅನುದಾನದಲ್ಲಿ ಕೊರತೆ ಆಗಿದೆ ಎಂದು ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 7ಕ್ಕೆ ಜಿಲ್ಲಾ ಪಂಚಾಯತ್‌ನ ಪ್ರಸಕ್ತ ಸದಸ್ಯರ ಅವಧಿ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಜಿ.ಪಂ. ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಜಿ.ಪಂ.ನ ಅಧ್ಯಕ್ಷರ ಕೊಠಡಿಯಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿಂದು ನೀಡಿದರು.

ಆರಂಭದ ಮೂರು ವರ್ಷಗಳಲ್ಲಿ ಜಿ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ಉತ್ತಮ ಕೆಲಸ ಕಾರ್ಯ ನಿರ್ವಹಿಸಲಾಗಿತ್ತು. ಸಾಕಷ್ಟು ಅನುದಾನವೂ ರಾಜ್ಯ ಸರಕಾರದಿಂದ ದೊರಕಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ವರ್ಷಂಪ್ರತಿ ರಾಜ್ಯ ಸರಕಾರದಿಂದ ನೀಡಲಾಗುವ ಅನುದಾನ ಬಂದಿಲ್ಲದ ಕಾರಣ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕಷ್ಟಸಾಧ್ಯವಾಗಿದೆ.

ಹಿಂದಿನ ರಾಜ್ಯ ಸರಕಾರದ ವೇಳೆ ಜಿಲ್ಲೆಯಲ್ಲಿ 21 ಬಹುಗ್ರಾಮ ಕುಡಿಯುವ ಯೋಜನೆಗಳಿಗೆ ಮಂಜೂರಾತಿಗೆ ಪ್ರಯತ್ನ ಮಾಡಲಾಗಿದ್ದರೂ ಬದಲಾದ ಸರಕಾರದಿಂದ ಬಂಟ್ವಾಳದ ಐದು ಯೋಜನೆಗಳಿಗೆ ಮಾತ್ರವೇ ಅನುಮತಿ ದೊರಕಿದೆ ಎಂದು ಹೇಳಿದರು. ಕಳೆದ ಐದು ವರ್ಷಗಳ ಜಿಲ್ಲಾ ಪಂಚಾಯತ್ ಆಡಳಿತದಲ್ಲಿ ಭ್ರಷ್ಟಾಚಾರವಿಲ್ಲದೆ ಅಭಿವೃದ್ಧಿ ಕಾರ್ಯ ನಡೆಸಿದ ತೃಪ್ತಿ ಇದೆಯಾದರೂ ಬಹು ನಿರೀಕ್ಷಿತ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ಬಗ್ಗೆ ನೋವಿದೆ ಎಂದು ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದರು. ಅದನ್ನು ಪೂರ್ಣಗೊಳಿಸಲು ಸಾಕಷ್ಟು ಪ್ರಯತ್ನದ ಹೊರತಾಗಿಯೂ ಯೋಜನೆ ವಿಫಲವಾಗಿರುವುದು ಜಿಲ್ಲೆಯ ಮಟ್ಟಿಗೆ ಕಪ್ಪು ಚುಕ್ಕೆ ಎಂದು ಹೇಳಿದ ಅವರು, ಯೋಜನೆಗೆ ಸಂಬಂಧಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಮಕ್ಕೆ ಬರೆಯಲಾಗಿದ್ದರೂ, ರಾಜ್ಯ ಸರಕಾರ ಅದೇ ಗುತ್ತಿಗೆದಾರನಿಂದ ಕಾಮಗಾರಿ ಮುಂದುವರಿಸಲು ಅವಕಾಶ ನೀಡುವ ಮೂಲಕ ಜಿ.ಪಂ. ಸದಸ್ಯರಿಗೆ ನೋವು ಮಾಡಿದೆ ಎಂದು ಅವರು ಹೇಳಿದರು. ಗೋಷ್ಠಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News