×
Ad

ಭಾಷಾ ಮಸೂದೆ ತಿದ್ದುಪಡಿ ಆಗ್ರಹಿಸಿ ಧರಣಿ

Update: 2016-01-11 13:21 IST

 ಕಾಸರಗೋಡು: ಕೇರಳ ಸರಕಾರದ ನೂತನ ಭಾಷಾ ಮಸೂದೆಯಲ್ಲಿ ಕನ್ನಡಿಗರಿಗೆ ಅನುಕೂಲವಾಗುವಂತೆ ಬದಲಾವಣೆಯಾಗಲೇಬೇಕು. ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ 1969ರಲ್ಲಿ ಜಾರಿಯಾದ ಭಾಷಾ ಮಸೂದೆಯಲ್ಲಿ ನೀಡಿದ ಎಲ್ಲ ಸವಲತ್ತುಗಳನ್ನು ಮರುಸ್ಥಾಪಿಬೇಕು. ಇದನ್ನು ಸರಕಾರದ ಗಮನಕ್ಕೆ ತರುವಲ್ಲಿ ಕನ್ನಡಿಗರೆಲ್ಲರು ಒಗ್ಗಟ್ಟಾಗಬೇಕು. ಕನ್ನಡ ಬಳಸುವ ಆಂದೋಲನದ ಮೂಲಕ ಸರಕಾರಿ ಕಚೇರಿಗಳಲ್ಲಿ, ಸಾಮಾಜಿಕ ಚಟುವಟಿಕೆಗಳಲ್ಲಿ ಕನ್ನಡ ಮನೆಮಾತಾಗಬೇಕು. ಯಾವ ರೀತಿ ಮಲಯಾಳ ಭಾಷೆ ಕೇರಳದಲ್ಲಿ ಆಡಳಿತ ಭಾಷೆಯೋ ಅಷೇ ಸ್ಥಾನಮಾನ ಕನ್ನಡಕ್ಕೆ ಸಿಗಲೇಬೇಕು. ಇದಕ್ಕಾಗಿ ಕನ್ನಡ ಬಳಸಿ ಉಳಿಸಿ ಆಂದೋಲನವನ್ನು ಜಿಲ್ಲೆಯಾದ್ಯಂತ ನಡೆಸಬೇಕು ಎಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರಾಧ್ಯಕ್ಷ ಮಹಾಲಿಂಗೇಶ್ವರ ಭಟ್ ನುಡಿದರು.

ಅವರು ಪೆರಡಾಲ ಜಿಬಿಯುಪಿ ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲೆಯ ಮುಖ್ಯ ಶಿಕ್ಷಕರು ಮತ್ತು ಉಪಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯ ಸಂಯುಕ್ತ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಕನ್ನಡ ನೌಕರರನ್ನು ನೇಮಿಸಿ ಕನ್ನಡ ಕಡತಗಳನ್ನು ವಿಲೇವಾರಿ ಮಾಡುವುದು ಸರಕಾರದ ಕೆಲಸ.

ಇತರ ಸಾರ್ವಜನಿಕ ಸಂಸ್ಥೆಗಳಲ್ಲಿಯೂ ಕನ್ನಡ ಉದ್ಯೋಗಸ್ಥರಿರಬೇಕಾಗಿದೆ. ಈ ಹಿಂದಿನ ಮಸೂದೆಯಲ್ಲಿ ಇಂತಹ ಹಕ್ಕುಗಳನ್ನು ಕನ್ನಡಿಗರಿಗೆ ನೀಡಲಾಗಿತ್ತಾದರೂ ಅವುಗಳ ಬಳಕೆಯಲ್ಲಿ ವ್ಯತ್ಯಯ ಉಮಟಾದುದರಿಂದ ಈಗ ಈ ಸ್ಥಿತಿ ಬಂದೊದಗಿದೆ. ಮುಂದೆ ನೂತನ ಭಾಷಾ ಮಸೂದೆಯಲ್ಲಿ ತಿದ್ದುಪಡಿ ಉಂಟಾಗಬೇಕಾದರೆ ಕನ್ನಡ ಬಳಸುವವರ ಸಂಖ್ಯೆಯೂ ಹೆಚ್ಚಾಗಬೇಕು. ಗತ ವರ್ಷಗಳಲ್ಲಿ ರಾಜ್ಯ ಸರಕಾರ ಕಡತ ವಿಲೇವಾರಿಯಲ್ಲಿ ಭಾಷಾವಾರು ಲೆಕ್ಕ ತೆಗೆದು ಕನ್ನಡ ಕಡತಗಳಿಲ್ಲ ಎಂಬ ಜಾಣತನವನ್ನು ಹೊರಹಾಕಿದೆ.

ಇದಕ್ಕೆ ಇಲ್ಲಿನ ಸರಕಾರಿ ಕಚೇರಿಗಳಲ್ಲಿರುವ ನೌಕರರು ಹೊಣೆಯಾಗಿದ್ದಾರೆ. ಕಾರ್ಯಬಾಹುಳ್ಯವಿರುವ ಸಾಮಾನ್ಯರನ್ನು ಒತ್ತಾಯಿಸಿ ಅಥವಾ ಕನ್ನಡ ಕಡತವನ್ನು ತಿರಸ್ಕರಿಸಿ ಕನ್ನಡ ಕಡತಗಳೇ ರಕಾರಿ ಕಚೇರಿಗಳಲ್ಲಿ ಇಲ್ಲದ ಸ್ಥಿತಿ ನಿರ್ಮಾಣಗೊಂ ಇಂದಿನ ಸ್ಥಿತಿಯನ್ನು ಸುಧಾರಿಸಬೇಕಾದರೆ ಕಾಸರಗೋಡಿನ ಎಲ್ಲ ಕನ್ನಡ ಸಂಘ-ಸಂಸ್ಥೆಗಳು, ಸಾಂಸ್ಕೃತಿಕ ಸಂಘಟನೆಗಳು, ಜಾತಿ ಸಂಘಟನೆಗಳು , ನ್ಯಾಯವಾದಿಗಳು, ರಾಜಕೀಯ ಸಂಘಟನೆಗಳು ಪರಸ್ಪರ ಕೈಜೋಡಿಸಿ ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದರು. ಭಾಷಾ ಮಸೂದೆಯಲ್ಲಿ ತಿದ್ದುಪಡಿಗಾಗಿ ನಡೆಸುವ ಹೋರಾಟ ತೀವ್ರಗೊಳಿಸಲು, ಇದರಂಗವಾಘಿ ಕಾಸರಗೋಡು ಜಿಲ್ಲೆಯ ಪ್ರಮುಖ ಶಿಕ್ಷಣ ಕಚೇರಿಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
  
ಘಟಕದ ಅಧ್ಯಕ್ಷೆ ಜ್ಯೋತಿ ಕೆ. ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ಉಪಾಧ್ಯಕ್ಷ ಕೆ. ವಿ. ಸತ್ಯನಾರಾಯಣ ರಾವ್, ಪೆರಡಾಲ ನವಜೀವನ ಶಾಲಾ ಮುಖ್ಯ ಶಿಕ್ಷಕ ಶಂಕರ ಸಾರಡ್ಕ, ನಿವೃತ್ತ ಪ್ರಾಂಶುಪಾಲ ಬೇಸಿ ಗೋಪಾಲಕೃಷ್ಣ ಭಟ್, ಮುಳ್ಳೇರಿಯ ಶಾಲಾ ಮುಖ್ಯ ಶಿಕ್ಷಕ ಎ. ವಿಷ್ಣು ಭಟ್, ಕಾರಡ್ಕ ಶಾಲೆಯ ಮುಖ್ಯ ಶಿಕ್ಷಕ ಕೇಶವ ಪ್ರಸಾದ್ ಎಸ್., ಅಗಲ್ಪಾಡಿ ಶಾಲಾ ಮುಖ್ಯ ಶಿಕ್ಷಕ ನಾಗರಾಜ ಬಿ., ನೀರ್ಚಾಲು ಶಾಲಾ ಮುಖ್ಯಶಿಕ್ಷಕ ವೆಂಕಟರಾಜ ಸಿ. ಎಚ್., ವಿದ್ಯಾಗಿರಿ ಶಾಲಾ ಮುಖ್ಯಶಿಕ್ಷಕಿ ಅಂಬಿಕ ಸರಸ್ವತಿ ಐ., ಕಿಳಿಂಗಾರು ಶಾಲಾ ಮುಖ್ಯ ಸಿಕ್ಷಕ ಕೆ. ರಾಮಕೃಷ್ಣ ಭಟ್, ಅಗಲ್ಪಾಡಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಜಗದೀಶ ಭಟ್ ಕೆ. ಎಮ., ಏತಡ್ಕ ಶಾಲಾ ಮುಖ್ಯ ಶಿಕ್ಷಕಿ ಸರೋಜ ಪಿ., ನಾರಾಯಣ ಮಂಗಲ ಶಾಲಾ ಮುಖ್ಯಶಿಕ್ಷಕ ಗೋಪಾಲಕೃಷ್ಣ ಭಟ್ ಕೆ., ಬಾಳೆಮೂಲೆ ಶಾಲಾ ಮುಖ್ಯ ಶಿಕ್ಷಕ ಜನಾರ್ಧನ ನಾಯಕ್ ಚೆರ್ಚೆಯಲ್ಲಿ ಭಾಗವಹಿಸಿದ್ದರು. ಕುಂಬಳೆ ಉಪಜಿಲ್ಲಾ ಘಟಕ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಮಲಾಕ್ಷ ನಾಯಕ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ. ವಿಷಯ ಪ್ರಸ್ತಾಪಿಸಿದರು. ಚಿತ್ರ:11ಕೆಎಸ್‌ಸಭೆ, 11ಕೆಎಸ್‌ಸಭೆ1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News