ಮೂಡುಬಿದಿರೆ: ವಿವಿ ಮಟ್ಟದ ಪಂದ್ಯಾಟಕ್ಕೆ ಚಾಲನೆ
ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ಆಶ್ರಯದಲ್ಲಿ ನಡೆಯುತ್ತಿರುವ ಮಂಗಳೂರು ವಿ.ವಿ ಮಟ್ಟದ, ಪುರುಷರ ಮತ್ತು ಮಹಿಳೆಯರ, ಅಂತರ್ ಕಾಲೇಜು ಸಾಫ್ಟ್‌ಬಾಲ್ ಪಂದ್ಯಾಟವನ್ನು ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಸೋಮವಾರ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಲೇಜಿನ ಹಳೆ ವಿದ್ಯಾರ್ಥಿ ಆದರ್ಶ ಎಂ. ಪಂದ್ಯಾಟಕ್ಕೆ ಶುಭವನ್ನು ಹಾರೈಸಿದರು.
ಮಹಾವೀರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ ದೀಕ್ಷಿತ್ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ರಮೇಶ್ ಭಟ್, ಮಂಗಳೂರು ವಿ.ವಿ. ಯ ದೈಹಿಕ ಶಿಕ್ಷಣವಿಭಾಗದ ನಿರ್ದೇಶಕ ಡಾ ಕಿಶೋರ್ ಕುಮಾರ್ ಸಿ.ಕೆ., ಉಪನಿರ್ದೇಶಕ ರಮೇಶ್ ಎಚ್.ಎನ್., ಮಂಗಳೂರು ವಿ.ವಿ. ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವೇಣುಗೋಪಾಲ ನೋಂಡಾ ಹಾಗೂ ಕಾಲೇಜಿನ ವಿದ್ಯಾರ್ಥಿ ನಾಯಕ ನೀಲ್ ಕೆನೆತ್ ವಾಸ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹರೀಶ್ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ರಾಜ್ ಪ್ರಸಾದ್ ವಂದಿಸಿದರು. ಮುಖ್ಯ ಗ್ರಂಥಪಾಲಕಿ ನಳಿನಿ ಕಾರ್ಯಕ್ರಮ ನಿರ್ವಹಿಸಿದರು.