×
Ad

ಸ್ವರ್ಣ ಮಹೋತ್ಸವದ ಸಂಭ್ರಮದಲ್ಲಿ ಪೆರ್ಮುದೆ ಚರ್ಚ್

Update: 2016-01-11 17:33 IST

ಮಂಗಳೂರು, ಜ.11: ಬಜ್ಪೆಯಿಂದ ಕಟೀಲು ರಸ್ತೆಯಲ್ಲಿ 5 ಕಿಮೀ. ಸಂಚರಿಸುವಾಗ ಸಿಗುವ ಊರು ಪೆರ್ಮುದೆ. ಇಲ್ಲಿನ ಹುಣ್ಸೆಕಟ್ಟೆಯಲ್ಲಿ ಸಂತ ಸ್ನಾನಿಕ ಯೋಹಾನ್ನರಿಗೆ ಸಮರ್ಪಿಸಿದ ದೇವಾಲಯವಿದ್ದು (ಚರ್ಚ್) ಪ್ರಸ್ತುತ ವರ್ಷ ಸ್ವರ್ಣ ಮಹೋತ್ಸವವನ್ನು ಆಚರಿಸುತ್ತಿದೆ.

 ಪೆರ್ಮುದೆ ಧರ್ಮಕೇಂದ್ರ ಸ್ಥಾಪನೆಯಾಗುವ ಮುಂಚೆ ಇಲ್ಲಿನ ಕ್ರೈಸ್ತ ಸಮುದಾಯವು ಬಜಪೆ ಹಾಗೂ ಕಳವಾರು ಧರ್ಮಕೇಂದ್ರಗಳ ಭಾಗವಾಗಿದ್ದರು. ಸೂಕ್ತ ಸಂಚಾರ ವ್ಯವಸ್ಥೆಯಿಲ್ಲದ ಆ ಸಮಯದಲ್ಲಿ ಹಲವಾರು ಮೈಲುಗಳು ನಡೆದು ಬಜಪೆ ಹಾಗೂ ಕಳವಾರು ಚರ್ಚ್‌ಗಳಿಗೆ ಹೋಗಿ ತಮ್ಮ ಧಾರ್ಮಿಕ ಅವಶ್ಯಕತೆಗಳನ್ನು ಪೂರೈಸುತ್ತಿದ್ದ ಇಲ್ಲಿನ ಕ್ರೈಸ್ತ ಸಮುದಾಯವು ಪೆರ್ಮದೆಯಲ್ಲಿ ಧರ್ಮಕೇಂದ್ರದ ಅವಶ್ಯಕತೆಯನ್ನು ಮನಗಂಡಿತು. ಇದೇ ಸಮಯದಲ್ಲಿ ಚಿಕ್ಕಮಗಳೂರಿನ ಘಟ್ಟ ಪ್ರದೇಶದಲ್ಲಿ ಕಾಫಿ ತೋಟದ ಮಾಲಕ ಪೆರ್ಮುದೆ ಮೂಲದವರಾದ ಜಾನ್ ಬ್ಯಾಪ್ಟಿಸ್ಟ್ ಬಾಲ್ತಾಜಾರ್ ನಜ್ರೆತ್‌ರ ಆರೋಗ್ಯಕ್ಕಾಗಿ ಅವರ ಪತ್ನಿ ಸೆರಾಫಿನ್ ನಜ್ರೆತ್ ಪೆರ್ಮುದೆಯಲ್ಲಿ ದೇವಾಲಯವೊಂದನ್ನು ನಿರ್ಮಿಸುವ ಹರಕೆಯನ್ನು ಹೊತ್ತಿದ್ದರು. ಹರಕೆಯನ್ನು ಪೂರ್ಣಗೊಳಿಸಲು ಪೆರ್ಮುದೆಯಲ್ಲಿ ಚರ್ಚನ್ನು ನಿರ್ಮಿಸಲು ಮುಂದೆ ಬಂದರು. ಈ ಜವಾಬ್ದಾರಿಯನ್ನು ಅವರ ಮಗಳು ಜುಲಿಯಾನಾ ನಜ್ರೆತ್ ವಹಿಸಿದರು. ಅಳಿಯ ಆಲ್ಬರ್ಟ್ ಆಬುಂದಿಯಸ್ ರೊಡ್ರಿಗಸ್ ಇದಕ್ಕಾಗಿ ತಮ್ಮ ಸಹಕಾರವನ್ನು ನೀಡಿದರು.

ದೇವಾಲಯ ನಿರ್ಮಾಣ ವೆಚ್ಚದಲ್ಲಿ ಮುಕ್ಕಾಲು ಪಾಲು ಸ್ಥಾಪಕರು ನೀಡುವುದು ಹಾಗೂ ಕಾಲು ಅಂಶವನ್ನು ಧರ್ಮಕೇಂದ್ರದ ಕುಟುಂಬಗಳು ಮರಮಟ್ಟುಗಳ ದಾನ ಹಾಗೂ ಶ್ರಮದಾನದೊಂದಿಗೆ ಭರಿಸುವ ನಿರ್ಧಾರದೊಂದಿಗೆ ಅಂದಿನ ಧರ್ಮಾಧ್ಯಕ್ಷರಾದ ದಿ ವಂ ರೈಮಂಡ್ ಡಿಮೆಲ್ಲೊ ಸ್ವಾಮಿಗಳು 1959 ನವೆಂಬರ್ 25ರಂದು ದೇವಾಲಯ ನಿರ್ಮಾಣದ ಅಡಿಗಲ್ಲನ್ನು ಆಶೀರ್ವಚಿಸಿದರು. ಬಜಪೆ ಧರ್ಮಕೇಂದ್ರದ ಧರ್ಮಗುರು ವಂ ಲಿಯೊ ಕರ್ವಾಲ್ಲೊರವರು ತಮ್ಮ ಸಹಕಾರವನ್ನು ನೀಡಿದರು. 1963 ಮೇ 16ರಂದು ಚರ್ಚ್ ಕಟ್ಟಡದ ಆಶೀರ್ವಚನ ನಡೆಯಿತು.

ದಿ ಜಾನ್ ಬ್ಯಾಪ್ಟಿಸ್ಟ್ ನಜ್ರೆತ್‌ರವರ ಸ್ಮರಣಾರ್ಥ ನಿರ್ಮಿಸಲ್ಪಟ್ಟ ದೇವಾಲಯವನ್ನು ಸತ್ಯ, ನ್ಯಾಯ-ನಿಷ್ಠುರರಾದ ಸಂತ ಸ್ನಾನಿಕ ಯೋಹಾನ್ನರಿಗೆ (ಸೈಂಟ್ ಜಾನ್ ಬ್ಯಾಪ್ಟಿಸ್ಟ್) ಸಮರ್ಪಿಸಲಾಯಿತು. ಬಜಪೆ ಧರ್ಮಕೇಂದ್ರದ ಸಹಾಯಕ ಗುರುಗಳಾದ ವಂ ಪೀಟರ್ ನೊರೊನ್ಹಾರವರು ಧರ್ಮಕೇಂದ್ರದ ವಸತಿ ಗ್ರಹದ ನಿರ್ಮಾಣ ಕಾರ್ಯವನ್ನು ಬಜಪೆ ಹಾಗೂ ಪೆರ್ಮುದೆ ಜನರ ಸಹಕಾರದೊಂದಿಗೆ ಕೈಗೊಂಡರು.

1965 ಅಕ್ಟೋಬರ್ 24 ರಂದು ಅಂದಿನ ಧರ್ಮಾಧ್ಯಕ್ಷರ ಅಧಿಕೃತ ಆದೇಶದೊಂದಿಗೆ ಬಜಪೆ ಹಾಗೂ ಕಳವಾರು ಧರ್ಮಕೇಂದ್ರಗಳಿಂದ ಬೇರ್ಪಡಿಸಿ ಪೆರ್ಮುದೆ ಧರ್ಮಕೇಂದ್ರದ ಅಧಿಕೃತ ಸ್ಥಾಪನೆಯಾಯಿತು. ದಿ ವಂ ಜಾಕೊಬ್ ಕ್ರಾಸ್ತಾರವರು ಪೆರ್ಮುದೆ ಧರ್ಮಕೇಂದ್ರದ ಪ್ರಪ್ರಥಮ ಧರ್ಮಗುರುಗಳಾದರು. ಮುಂದೆ ಕಟೀಲು ಧರ್ಮಕೇಂದ್ರದ ಸ್ಥಾಪನೆಯಾದಾಗ ಕಟೀಲಿನಿಂದ ಎಕ್ಕಾರುವರೆಗಿನ ಪೆರ್ಮುದೆ ಧರ್ಮಕೇಂದ್ರದ ಕುಟುಂಬಗಳು ಕಟೀಲು ಧರ್ಮಕೇಂದ್ರಕ್ಕೆ ಸೇರ್ಪಡೆಯಾದವು.

ಪ್ರಾರಂಭದ ವರ್ಷಗಳಲ್ಲಿ ಕೃಷಿ ಹಾಗೂ ಹೈನುಗಾರಿಕೆ ಇಲ್ಲಿನ ಜನರ ಜೀವನೋಪಾಯವಾಗಿದ್ದವು. ಹಾಲಿನ ಉತ್ಪದಾನೆಯು ಅಧಿಕವಾಗಿದ್ದಂದಲೇ ತುಳುವಿನಲ್ಲಿ ಪೇರ್‌ದ ಮುದ್ದೆ ಎಂಬ ಅನ್ವರ್ಥ ನಾಮವು ಪೆರ್ಮದೆಯಾಗಿ ಹೆಸರು ಪಡೆಯಿತು ಎಂಬುದು ಪ್ರತೀತಿ. ಶೈಕ್ಷಣಿಕ ಕ್ಷೇತ್ರಕ್ಕೆ ಪ್ರಾಮುಖ್ಯತೆಯನ್ನು ನೀಡಿದುದರಿಂದಾಗಿ ಹಲವಾರು ಜನರು ಇಂದು ಊರು, ಪರವೂರು, ಕೊಲ್ಲಿ ರಾಷ್ಟ್ರಗಳಲ್ಲಿ ವೃತ್ತಿಯನ್ನು ನಡೆಸಿ ಧರ್ಮಕೇಂದ್ರದ ಆರ್ಥಿಕ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಕೃಷಿಯೊಂದಿಗೆ ಸ್ವ ಉದ್ಯೋಗವನ್ನು ಸ್ಥಾಪಿಸಿ ಪ್ರಗತಿಯನ್ನು ಕಂಡಿದ್ದಾರೆ.

ಧರ್ಮಕೇಂದ್ರದಲ್ಲಿ ಸೇವೆಯನ್ನು ಸಲ್ಲಿಸಿರುವ ಧರ್ಮಗುರುಗಳು

       1.ದಿ ವಂ ಜೇಕಬ್ ಎಸ್. ಕ್ರಾಸ್ತಾ

       2.ವಂ ಎಡ್ವಿನ್ ಪಿಂಟೊ

       3.ವಂ ಹಿಲರಿ ಸಾಂಕ್ತಿಸ್

       4.ವಂ ಹೆನ್ರಿ ಫೆರ್ನಾಂಡಿಸ್

       5.ದಿ ವಂ ಜೋಸೆಫ್ ಲೋಬೊ

       6.ವಂ ವರ್ನನ್ ವಾಸ್ (ಆಡಳಿತಾಧಿಕಾರಿ)

       7.ವಂ ಡೆನಿಸ್ ಮೊರಾಸ್ ಪ್ರಭು

       8.ವಂ ವಿಕ್ಟರ್ ಜಾರ್ಜ್ ಡಿಸೋಜ

       9.ದಿ ವಂ ಪೀಟರ್ ಥಿಯೊದೋರ್ ಡಿಸೋಜ

       10.ವಂ ರಿಚರ್ಡ್ ಲಸ್ರಾದೊ

       11.ವಂ ಓಸ್ವಲ್ಡ್ ಲಸ್ರಾದೊ

       12.ವಂ ವಲೇರಿಯನ್ ರೊಡ್ರಿಗಸ್

       13.ವಂ ಎಡ್ವಿನ್ ವಿನ್ಸೆಂಟ್ ಕೊರೆಯಾ (ಪ್ರಸ್ತುತ ಧರ್ಮಗುರುಗಳು)

ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರುಗಳು

       1.ಎಸ್. ಡಬ್ಲ್ಯು ಡಿಕುನ್ಹಾ

       2.ಸೆಬಾಸ್ಟಿಯನ್ ಪಿಂಟೊ

       3.ರೊಸಾರಿಯೊ ವಾಲ್ಡರ್

       4.ಬೊನವೆಂಚರ್ ಡಿಕುನ್ಹಾ

       5.ಫ್ರಾನ್ಸಿಸ್ ನಜ್ರೆತ್

       6.ರೊಬರ್ಟ್ ಮಿಸ್ಕಿತ್

       7.ಆಲ್ಫೊನ್ಸ್ ಫೆರ್ನಾಂಡಿಸ್

       8.ರೊಬರ್ಟ್ ಸಿಕ್ವೇರಾ

       9.ವಿನ್ಸೆಂಟ್ ಪಿಂಟೊ

       10.ಜೊರ್ಜ್ ಫೆರ್ನಾಂಡಿಸ್

       11.ಪಾಸ್ಕಲ್ ಡಿಸೋಜ

       12.ರೋಶನ್ ರೊಡ್ರಿಗಸ್

ಕಳೆದ 50 ವರ್ಷಗಳಲ್ಲಿ ನಮ್ಮ ಸಂತ ಸ್ನಾನಿಕ ಯೋಹಾನ್ನರ ಆಶೀರ್ವಾದಗಳು ನಮ್ಮೊಂದಿಗಿವೆ. ಸತ್ಯ-ನೀತಿಯ ದಾರಿಯಲ್ಲಿ ನಡೆದ ಅವರು ನಮಗೆ ಆದರ್ಶ. ಧರ್ಮಕೇಂದ್ರದಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳ ಪ್ರಯತ್ನದಿಂದ ದೇವರ ಭಯ-ಭಕ್ತಿಯೊಂದಿಗೆ ಸಾಮಾಜಿಕ ಪ್ರಗತಿಯೂ ಆಗಿದೆ. ಹಲವಾರು ಧರ್ಮಗುರುಗಳು, ಧರ್ಮಭಗಿನಿಯರನ್ನು ನಮ್ಮ ಧರ್ಮಕೇಂದ್ರವು ನೀಡಿದೆ. 184 ಕುಟುಂಬಗಳಿರುವ 750 ಕ್ರೈಸ್ತರನ್ನು ಹೊಂದಿರುವ ಸಣ್ಣ ಧರ್ಮಕೇಂದ್ರವಾದರೂ ಕಳೆದ 50 ವರುಷಗಳಿಂದ ಭಗವಂತನು ನಮ್ಮ ಮೇಲೆ ಕರುಣಿಸಿದ ಕೃಪೆಗೆ ಕ್ರತಾಥರ್ರಾಗಿ ಸ್ವರ್ಣಮಹೋತ್ಸವವನ್ನು ಸಮಾಜದ ಎಲ್ಲಾ ಧರ್ಮಗಳ ಜನರ ಭಾಗವಹಿಸುವಿಕೆಯೊಂದಿಗೆ ನಡೆಸಬೇಕೆಂಬ ಇಚ್ಛೆಯೊಂದಿಗೆ ಜ.13, 2016 ರಂದು ಸ್ವರ್ಣಮಹೋತ್ಸವ ಸಂಭ್ರಮವನ್ನು ಹಮ್ಮಿಕೊಂಡಿರುತ್ತೇವೆ.

ಧರ್ಮಕೇಂದ್ರದ ಯುವ ಧರ್ಮಗುರುಗಳಾದ ವಂ ಎಡ್ವಿನ್ ವಿನ್ಸೆಂಟ್ ಕೊರೆಯಾ ಅವರ ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆಯೊಂದಿಗೆ ಸ್ವರ್ಣ ಮಹೋತ್ಸವದ ಸವಿನೆನಪಿಗಾಗಿ ಆರೋಗ್ಯನಿಧಿ, ಬಡ ಕುಟುಂಬವೊಂದಕ್ಕೆ ಉಚಿತ ಮನೆ ನಿರ್ಮಾಣ, ಸ್ಮರಣ ಸಂಚಿಕೆ ಬಿಡುಗಡೆ ಮುಂತಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News