ವೈರಿಗಳಿಗೆ ತಕ್ಕ ಉತ್ತರ
ಪಠಾಣ್‌ಕೋಟ್ ದಾಳಿ ವಿರುದ್ಧ ಗುಡುಗಿದ ಪಾರಿಕ್ಕರ್
ಹೊಸದಿಲ್ಲಿ, ಜ.11: ಭಾರತವು ತನ್ನ ವೈರಿಗಳಿಗೆ ತಕ್ಕ ಉತ್ತರ ನೀಡುವುದೆಂಬ ಕಠಿಣ ಸಂದೇಶವನ್ನು ನೀಡಿರುವ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್, ಒಬ್ಬ ಸೈನಿಕನ ಸಾವಿನಿಂದ ಆಗುವ ನೋವನ್ನು ದೇಶಕ್ಕೆ ಅಪಾಯವುಂಟು ಮಾಡುವವರಿಗೆ ವರ್ಗಾಯಿಸಲಾಗುವುದು ಎಂದಿದ್ದಾರೆ.
ಜ.2ರಂದು ಪಠಾಣ್‌ಕೋಟ್ ವಾಯು ನೆಲೆಗೆ 6 ಮಂದಿ ಭಯೋತ್ಪಾದಕರು ದಾಳಿ ನಡೆಸಿ 7 ಮಂದಿ ಸೈನಿಕರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಹೊರಟಿದೆ.
‘‘ನನ್ನ ಸೈನಿಕರು ಮರಣ ಹೊಂದಿದಾಗ ನನಗೆ ನೋವಾಗುತ್ತದೆ. ಈ ನೋವನ್ನು ವರ್ಗಾಯಿಸಲೇಬೇಕು. ತ್ಯಾಗವು ಸದಾ ಗೌರವಿಸಲ್ಪಡುತ್ತದೆ. ಆದರೆ, ವೈರಿಗಳನ್ನು ತಟಸ್ಥಗೊಳಿಸಲು ದೇಶಕ್ಕೆ ನಿಮ್ಮ ಅಗತ್ಯವಿದೆ.’’ ಎಂದು ಪಾರಿಕ್ಕರ್, ದಿಲ್ಲಿಯಲ್ಲಿ ನಡೆದ 66ನೆ ಸೇನಾದಿನಾಚರಣೆಯ ಸಂದರ್ಭ ಮಾತನಾಡುತ್ತ ಹೇಳಿದರು.
ಯಾರಾದರೂ ಈ ದೇಶಕ್ಕೆ ಅಪಾಯ ಮಾಡಿದರೆ, ಅಂತಹ ಸಂಘಟನೆ ಅಥವಾ ವ್ಯಕ್ತಿಯೂ ಅಂತಹ ಚಟುವಟಿಕೆಯ ನೋವು ಅನುಭವಿಸಬೇಕು. ಈ ನೋವು ವರ್ಗಾವಣೆಯಾಗದ ಹೊರತು, ಆತ ನಮಗೆ ನೋವು ನೀಡುತ್ತಾ ಆನಂದಿಸು ತ್ತಿರುತ್ತಾನೆ. ವೈರಿಗಳನ್ನು ತಟಸ್ಥಗೊಳಿಸಲು ದೇಶಕ್ಕೆ ಸೈನಿಕರ ಅಗತ್ಯವಿದೆ ಎಂದು ಪಾರಿಕ್ಕರ್ ತಿಳಿಸಿದರು.
ಪಠಾಣ್‌ಕೋಟ್ ದಾಳಿಕಾರರ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳುವುದೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಪಾಕಿಸ್ತಾನ ಕ್ರಮಕೈಗೊಳ್ಳುವುದೇ ಇಲ್ಲವೇ ಎಂದು ತಾನು ಹೇಳಲಾರೆನೆಂದರು.
ದಾಳಿ ಸ್ಥಳದಲ್ಲಿ ಇನ್ನೊಂದು ಮೊಬೈಲ್ ಫೋನ್ ಪತ್ತೆ ಹತ ಭಯೋತ್ಪಾದಕರ ಗುರುತು ಪತ್ತೆಗೆ ಇಂಟರ್‌ಪೋಲ್‌ನಿಂದ ನೋಟಿಸ್
ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಠಾಣ್‌ಕೋಟ್ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟಿರುವ ಉಗ್ರರ ಗುರುತು ಪತ್ತೆಗಾಗಿ ಭಾರತದ ಕೋರಿಕೆಯ ಮೇರೆಗೆ ಇಂಟರ್‌ಪೋಲ್ ಬ್ಲಾಕ್ ಕಾರ್ನರ್ ನೋಟಿಸನ್ನು ಹೊರಡಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಸೋಮವಾರ ತಿಳಿಸಿದೆ.
ಇದೇ ವೇಳೆ ವಾಯುನೆಲೆಯ ಮೇಲಿನ ದಾಳಿ ಸ್ಥಳದಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿರುವ ಎನ್‌ಐಎ ತಂಡವು ಇನ್ನೊಂದು ಮೊಬೈಲ್ ಫೋನ್,ಒಂದು ಎಕೆ-47 ರೈಫಲ್ ಮ್ಯಾಗಝಿನ್ ಮತ್ತು ಬೈನಾಕ್ಯುಲರ್‌ನ್ನು ವಶಪಡಿಸಿಕೊಂಡಿದೆ ಎಂದು ಸಚಿವಾಲಯದ ವಕ್ತಾರರು ತಿಳಿಸಿದರು.
ಎನ್‌ಐಎ ತಂಡಗಳು ಪಠಾಣ್‌ಕೋಟ್ ವಾಯುನೆಲೆಯೊಳಗೆ ಮತ್ತು ಹೊರಗೆ ಪ್ರತ್ಯಕ್ಷದರ್ಶಿಗಳನ್ನು ಪ್ರಶ್ನಿಸುತ್ತಿವೆ ಎಂದು ಅವರು ಹೇಳಿದರು. ತನ್ಮಧ್ಯೆ ಪಂಜಾಬ್ ಪೊಲೀಸ್ ಎಸ್‌ಪಿ ಸಲ್ವಿಂದರ್ ಸಿಂಗ್ ಅವರನ್ನು ತಕ್ಷಣ ಬಂಧಿಸುವ ಸಾಧ್ಯತೆಯನ್ನು ಕೇಂದ್ರವು ತಳ್ಳಿಹಾಕಿದೆ. ತನ್ನ ಹೇಳಿಕೆಗಳಲ್ಲಿಯ ವಿರೋಧಾಭಾಸಗಳಿಗಾಗಿ ಸಿಂಗ್ ಮತ್ತು ಅವರ ಆಭರಣ ವ್ಯಾಪಾರಿ ಸ್ನೇಹಿತ ರಾಜೇಶ್ ವರ್ಮಾ ಅವರನ್ನು ವಿಚಾರಣೆಗೊಳಪಡಿಸಲಾಗಿದೆ.
ಪಾಕಿಸ್ತಾನದಲ್ಲಿ ಶಂಕಿತರ ವಿಚಾರಣೆ
ಪಠಾಣಕೋಟ್ ಭಯೋತ್ಪಾದಕ ದಾಳಿಗಳಿಗೆೆ ಸಂಬಂಧಿಸಿದಂತೆ ಸೋಮವಾರ ಬೆಳಿಗ್ಗೆ ಪಾಕಿಸ್ತಾನದ ಅಧಿಕಾರಿಗಳು ಝೇಲಂ ಮತ್ತು ಸಿಯಾಲ್‌ಕೋಟ್‌ಗಳಲ್ಲಿ ದಾಳಿಗಳನ್ನು ನಡೆಸಿದ್ದಾರೆಂದು ವರದಿಯಾಗಿದೆ. ವಿಚಾರಣೆಗಾಗಿ ಕೆಲವರನ್ನು ವಶಕ್ಕೂ ತೆಗೆದುಕೊಳ್ಳಲಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ.
ಭಾರತವು ಒದಗಿಸಿರುವ ಸಾಕ್ಷಾಧಾರಗಳ ಆಧಾರದಲ್ಲಿ ಪಾಕಿಸ್ತಾನವು ಕ್ರಮ ಕೈಗೊಳ್ಳುತ್ತಿದೆ ಎಂದು ಅಲ್ಲಿನ ಮೂಲಗಳು ತಿಳಿಸಿವೆ. ಆದರೆ ಭಾರತವು ಒದಗಿಸಿರುವ ಸಾಕ್ಷಾಧಾರಗಳು ಯಾವುದೇ ಬಂಧನವನ್ನು ಕೈಗೊಳ್ಳಲು ಸಾಕಾಗುವಷ್ಟಿಲ್ಲ ಎಂದು ಅವು ಹೇಳಿವೆ.