ಸಾವಿತ್ರಿಬಾಯಿ ಫುಲೆಯವರ 185ನೆ ಜನ್ಮದಿನಾಚರಣೆ
ಬೆಳ್ತಂಗಡಿ, ಜ.11: ಜಾತಿ ವ್ಯವಸ್ಥೆಯಿಂದ ಮಡುಗಟ್ಟಿದ ಕರ್ಮಠವಾದಿಗಳ ಕಪಿ ಮುಷ್ಠಿಯಲ್ಲಿ ನಲುಗುತ್ತಿದ್ದ ಕಾಲಘಟ್ಟದಲ್ಲಿ ಶೋಷಿತರ ಬಾಳಿಗೆ ಜ್ಯೋತಿಯಾಗಿ ಬಂದ ಸಾವಿತ್ರಿಬಾಯಿ ಫುಲೆ ವಿಧವೆಯವರಿಗೆ, ಅನಾಥ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದರ ಮೂಲಕ ಪುನರ್ವಸತಿ ಕೇಂದ್ರಗಳನ್ನು ತೆರೆದರು. ಅಂತರ್ಜಾತಿಯ ವಿವಾಹವನ್ನು ಹಾಗೂ ವಿಧವೆಯವರ ಮರುವಿವಾಹವನ್ನು ಮಾಡಿಸುವುದರ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟರು. ಇಂತಹ ಅನೇಕ ಕ್ರಾಂತಿಕಾರಿ ಸಾಮಾಜಿಕ ಹೋರಾಟವನ್ನು ಮಾಡಿದ ಆಧುನಿಕ ಭಾರತದ ಮಹಿಳಾ ಹಕ್ಕುಗಳ ಪ್ರಥಮ ಹೋರಾಟಗಾರ್ತಿ ಮಾತೆ ಸಾವಿತ್ರಿಬಾಯಿ ಫುಲೆ ಎಂದು ಸಾಹಿತಿ ಅತ್ರಾಡಿ ಅಮೃತ ಶೆಟ್ಟಿ ಹೇಳಿದರು. ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿಗಳ ವಿದ್ಯಾರ್ಥಿನಿ ನಿಲಯದಲ್ಲಿ ನಡೆದ ಮಾತೆ ಸಾವಿತ್ರಿಬಾಯಿ ಫುಲೆಯವರ 185ನೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಧಮ್ಮಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿನಿ ನಿಲಯದ ಮೇಲ್ವಿಚಾರಕಿ ಲಲಿತಾ ಶೆಟ್ಟಿ ವಹಿಸಿದ್ದರು. ಸುಖೇಶ್ ಮಾಲಾಡಿ, ಚೆನ್ನಪ್ಪಕಕ್ಕೆಪದವು ಉಪಸ್ಥಿತರಿದ್ದರು. ರಶ್ಮಿ ಸ್ವಾಗತಿಸಿದರು. ಶಿಲ್ಪಾನಿರೂಪಿಸಿ ವಂದಿಸಿದರು.