ಜಲ್ಲಿಕಟ್ಟು: ಪ್ರಾಣಿಹಕ್ಕು ತಂಡದ ಮೇಲೆ ಕೇಂದ್ರ ಗರಂ
ನವದೆಹಲಿ: ಜಲ್ಲಿಕಟ್ಟು ನಿಷೇಧ ತೆರವುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ಭಾರತದ ಪ್ರಾಣಿ ಕಲ್ಯಾಣ ಮಂಡಳಿ (ಎಡಬ್ಲ್ಯುಬಿಐ)ಗೆ ಕೇಂದ್ರ ಸರ್ಕಾರ, ಅರ್ಜಿ ವಾಪಾಸು ಪಡೆಯಿರಿ ಇಲ್ಲವೇ ರಾಜೀನಾಮೆ ನೀಡಿ ಎಂದು ತಾಕೀತು ಮಾಡಿದೆ.
ಎಡಬ್ಲ್ಯುಬಿಐ ಹಾಗೂ ಹಲವು ಸ್ವಯಂಸೇವಾ ಸಂಸ್ಥೆಗಳು ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ಮುನ್ನಾ ದಿನ ಕೇಂದ್ರ ಮಂಡಳಿಗೆ ಈ ಸೂಚನೆ ನೀಡಿದೆ. ಅಧ್ಯಕ್ಷ ಹಾಗೂ ನಿವೃತ್ತ ಮೇಜರ್ ಜನರಲ್ ಡಾ.ಆರ್.ಎಂ.ಖರ್ಬ್ ಹಾಗೂ ಹಲವು ಸದಸ್ಯರಿಗೆ ಪರಿಸರ ಸಚಿವಾಲಯ ಈ ಸೂಚನೆ ರವಾನಿಸಿದೆ.
ಎಡಬ್ಲ್ಯುಬಿಐ, ಪರಿಸರ ಸಚಿವಾಲಯದಡಿ ಕಾರ್ಯನಿರ್ವಹಿಸುವ ಶಾಸನಬದ್ಧ ಸಂಸ್ಥೆಯಾಗಿದ್ದು, 22 ಸದಸ್ಯರನ್ನು ಹೊಂದಿದೆ. ಈ ಪೈಕಿ ಬಹುತೇಕ ಮಂದಿ ಅಧಿಕಾರೇತರ ಸದಸ್ಯರು. ಉಳಿದಂತೆ ಕೆಲ ಅಧಿಕಾರಿಗಳನ್ನು ಸರ್ಕಾರ ಸದಸ್ಯರಾಗಿ ನೇಮಕ ಮಾಡುತ್ತದೆ.
ಎಡಬ್ಲ್ಯುಬಿಐ ಅಧ್ಯಕ್ಷರನ್ನು ಕರೆಸಿಕೊಂಡ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ರಾಜೀನಾಮೆ ಪತ್ರ ನೀಡುವಂತೆ ಸೂಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ. ಸಚಿವಾಲಯದಡಿಯಲ್ಲೇ ಕಾರ್ಯನಿರ್ವಹಿಸುವ ಮಂಡಳಿ ಸರ್ಕಾರದ ವಿರುದ್ಧವೇ ನ್ಯಾಯಾಲಯಕ್ಕೆ ಹೋಗಲು ಹೇಗೆ ಸಾಧ್ಯ ಎಂದು ಅಧಿಕಾರಿ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.