ದಕ್ಷಿಣ ಕನ್ನಡವನ್ನು ಸೋಲಾರ್ ಜಿಲ್ಲೆಯಾಗಿ ಪರಿವರ್ತನೆ: ಐವನ್ ಡಿಸೋಜಾ
ಕಡಬ, ಜ.12. ದಕ್ಷಿಣ ಕನ್ನಡ ಜಿಲ್ಲೆಯನ್ನು ಸೋಲಾರ್ ಜಿಲ್ಲೆಯಾಗಿ ಪರಿವರ್ತಿಸಿ ರಾಜ್ಯದಲ್ಲಿ ಮಾದರಿ ಜಿಲ್ಲೆಯನ್ನಾಗಿಸುವ ಪ್ರಯತ್ನ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ.ಸೋಜಾ ಹೇಳಿದರು. ಅವರು ಮಂಗಳವಾರ ಪೆರಾಬೆ ಗ್ರಾಮಕ್ಕೆ ಭೇಟಿ ನೀಡಿ ಎಂಡೋ ಪೀಡಿತರ ಮನೆಗಳಿಗೆ ಅಳವಡಿಸಲಾದ ಸೋಲಾರ್ ಘಟಕಕ್ಕೆ ಚಾಲನೆ ನೀಡಿ ಪೆರಾಬೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಪೆರಾಬೆ ಗ್ರಾಮದ ಎಂಡೊ ಸಂತ್ರಸ್ಥರ ಮನೆಗಳಿಗೆ ವಿಧಾನ ಪರಿಷತ್ ಅನುದಾನದಿಂದ ಬಿಡುಗಡೆಯಾದ ಮೊತ್ತದಲ್ಲಿ ಸೋಲಾರ್ ಘಟಕವನ್ನು ನಿರ್ಮಿಸಿ ಕೊಡಲಾಗುವುದು. ಸರಕಾರವು ಈಗಾಗಲೇ ಎಂಡೋ ಸಂತ್ರಸ್ಥರಿಗೆ ಯೋಗ್ಯ ಮಾಸಾಸನ, ಉಚಿತ ಪಡಿತರ ಕೊಡುತ್ತಿದ್ದು, ಮುಂದಿನ ದಿನಗಳಲ್ಲಿ ಆಲಂಕಾರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶಾಶ್ವತ ಪುನರ್ವಸತಿ ಕೇಂದ್ರದ ನಿರ್ಮಾಣಕ್ಕಾಗಿ ವಿಧಾನ ಪರಿಷತ್‌ನಿಂದಾಗುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದರು.
ಪೆರಾಬೆ ಸೋಲಾರ್ ಘಟಕದ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಯಮುನಾ ಎಸ್. ರೈ ಮಾತನಾಡಿ ಪೆರಾಬೆ ಗ್ರಾಮದಲ್ಲಿ 1272ಮನೆಗಳಿದ್ದು 1ಕೋಟಿ 44 ಲಕ್ಷ ರೂಪಾಯಿ ವೆಚ್ಚದಲ್ಲಿ ಸೋಲಾರ್ ಘಟಕವನ್ನು ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಹಲವು ಸಂಘ ಸಂಸ್ಥೆ ಮತ್ತು ಸೆಲ್ಕೋ ಸೋಲಾರ್ ನೆರವಿನಿಂದ 200 ಮನೆಗಳಿಗೆ ಸೋಲಾರ್ ಅಳವಡಿಸಲಾಗಿದೆ. ಇನ್ನೂ ಸುಮಾರು 40 ಮನೆಗಳು ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿವೆ. ಅವುಗಳನ್ನು ಮುಂದಿನ ದಿನದಲ್ಲಿ ಮೊದಲ ಆಧ್ಯತೆಯಲ್ಲಿ ಸೋಲಾರ್ ಘಟಕ ಅಳವಡಿಸಲು ಪ್ರಯತ್ನಿಸಲಾಗುವುದು ಎಂದರು.
ಪೆರಾಬೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ.ಸಿ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗ ಖಾತರಿ ಯೋಜನೆಯ ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ ಮಾತನಾಡಿದರು. ಜನಶಿಕ್ಷಣ ಟ್ರಸ್ಟ್‌ನ ಕೃಷ್ಣ ಮೂಲ್ಯ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಪಿ ವರ್ಗಿಸ್, ಪೆರಾಬೆ ಪಂಚಾಯಿತಿ ಮಾಜಿ ಸದಸ್ಯ ರೋಯಿ ಅಬ್ರಾಹಂ, ಸೆಲ್ಕೋ ಸೋಲಾರ್ ಘಟಕ ಮುಖ್ಯಸ್ಥರಾದ ಕೃಷ್ಣರಾಜ್, ಸುಧಾಕರ, ಪೆರಾಬೆ ಪಂಚಾಯಿತಿ ಸದಸ್ಯರಾದ, ಅಮೃತಾ ರೈ, ಗಂಗಾರತ್ನಾ, ಚಂದ್ರಶೇಖರ ರೈ, ದಿನೇಶ್ ಎ, ಮಧುರಾ, ಚಂದ್ರಶೇಖರ ರೈ, ಮೊದಲಾದವರು ಉಪಸ್ಥಿತರಿದ್ದರು. ಪಂಚಾಯಿತಿ ಕಾರ್ಯದರ್ಶಿ ಲಲಿತಾ ಜಿ.ಡಿ ಸ್ವಾಗತಿಸಿ, ವಂದಿಸಿದರು.