ಎನ್‌ಕೌಂಟರ್ ದಯಾನಾಯಕ್ ಪೊಲೀಸ್ ಇಲಾಖೆಗೆ ಮರುಸೇರ್ಪಡೆ
ಮುಂಬೈ,ಜ.12: ‘ಎನ್‌ಕೌಂಟರ್ ಸ್ಪೆಶಲಿಸ್ಟ್’ ಎಂದೇ ಖ್ಯಾತರಾದ ಪೊಲೀಸ್ ಅಧಿಕಾರಿ ದಯಾನಾಯಕ್‌ರನ್ನು, ಮಹಾರಾಷ್ಟ್ರದ ಪೊಲೀಸ್ ಇಲಾಖೆಗೆ ಮರುನೇಮಕಗೊಳಿಸಲಾಗಿದೆ.ದಯಾನಾಯಕ್ ಅವರ ಅಮಾನತನ್ನು ರದ್ದುಗೊಳಿಸಲಾಗಿದೆಯೆಂದು, ಹೆಸರು ಬಹಿರಂಗಪಡಿಸಲಿಚ್ಚಿಸದ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕರ್ತವ್ಯಕ್ಕೆ ಹಾಜರಾಗದೆ ಇದ್ದುದಕ್ಕಾಗಿ, ದಯಾನಾಯಕ್ ಅವರನ್ನು ಕಳೆದ ವರ್ಷದ ಜೂನ್‌ನಲ್ಲಿ ಅಮಾನತುಗೊಳಿಸಲಾಗಿತ್ತು. ನಾಗಪುರಕ್ಕೆ ವರ್ಗಾವಣೆಗೊಂಡ ಬಳಿ ದಯಾನಾಯಕ್ ಅನಾರೋಗ್ಯದ ಕಾರಣ ನೀಡಿ ದೀರ್ಘ ಅವಧಿಯವರೆಗೆ ರಜೆಯಲ್ಲಿದ್ದರು. ಇದಕ್ಕೂ ಮುನ್ನ ದಯಾನಾಯಕ್ ಅವರನ್ನು ಸುಮಾರು ಆರು ವರ್ಷಗಳವರೆಗೆ ಅಮಾನತಿನಲ್ಲಿಡಲಾಗಿತ್ತು. 2012ರ ಜೂನ್‌ನಲ್ಲಿ ಅವರನ್ನು ಮರುನೇಮಕಗೊಳಿಸಲಾಗಿತ್ತು.
1995ರಲ್ಲಿ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದ ದಯಾನಾಯಕ್, ಹಲವಾರು ಭೂಗತಪಾತಕಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈಯುವ ಮೂಲಕ ಸುದ್ದಿಯಾಗಿದ್ದರು. 2006ರಲ್ಲಿ ಅಕ್ರಮ ಆಸ್ತಿ ಹೊಂದಿದ ಆರೋಪದಲ್ಲಿ ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹದಳವು ಅವರನ್ನು ಬಂಧಿಸಿತ್ತು. 2010ರಲ್ಲಿ ಸುಪ್ರೀಂಕೋರ್ಟ್ ಅವರ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿತು. 2012ರಲ್ಲಿ ಮತ್ತೆ ಮಹಾರಾಷ್ಟ್ರ ಪೊಲೀಸ್ ಇಲಾಖೆಗೆ ಮರುನೇಮಕಗೊಂಡ ದಯಾನಾಯಕ್, ಸ್ಥಳೀಯ ಶಸ್ತ್ರಾಸ್ತ್ರ ದಳದಲ್ಲಿ ನಿಯೋಜಿಸಲ್ಪಟ್ಟಿದ್ದರು.
ಅಲ್ಲಿ ಸ್ವಲ್ಪ ಸಮಯ ಸೇವೆ ಸಲ್ಲಿಸಿದ ಬಳಿಕ, ಪೊಲೀಸ್ ಇಲಾಖೆಯ ಉನ್ನತ ವಲಯವೆಂದೇ ಪರಿಗಣಿಸಲ್ಪಟ್ಟಿರುವ ಪಶ್ಚಿಮ ಮುಂಬೈ ಪ್ರಾಂತಕ್ಕೆ ವರ್ಗಾವಣೆಗೊಂಡಿದ್ದರು. ಆನಂತರ ಅವರು ನಾಗಪುರಕ್ಕೆ ವರ್ಗಾಯಿಸಲ್ಪಟ್ಟಿದ್ದರು. ದಯಾನಾಯಕ್ ಮೂಲತಃ , ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆಯರು.