×
Ad

ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿರುವ ಪಿಡಿಪಿ ಅಧ್ಯಕ್ಷೆಯ ವೌನ

Update: 2016-01-12 23:31 IST

ಹೊಸದಿಲ್ಲಿ,ಜ.12: ಪಿಡಿಪಿ ಅಧ್ಯಕ್ಷೆ ಮುಫ್ತಿ ಮೆಹಬೂಬ ಅವರ ವೌನವು ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ಅವರ ನಿಧನದ ಬಳಿಕ ರಾಜಕೀಯ ಅನಿಶ್ಚಿತತೆಯ ಸುಳಿಯಲ್ಲಿ ಸಿಲುಕಿರುವ ಜಮ್ಮು-ಕಾಶ್ಮೀರದಲ್ಲಿ ಸರಕಾರ ರಚನೆಯ ಕುರಿತಂತೆ ಬಿಜೆಪಿಯಲ್ಲಿ ತಲ್ಲಣಕ್ಕೆ ಕಾರಣವಾಗಿದೆ,ಅದರ ತವಕ,ಕಾತರಗಳು ಹೆಚ್ಚುತ್ತಿವೆ.

ಪ್ರಸಕ್ತ ತನ್ನ ತಂದೆಯ ನಿಧನದ ಶೋಕಾಚರಣೆಯಲ್ಲಿರುವ ಮೆಹಬೂಬ ತಾನು ಮೈತ್ರಿಯನ್ನು ಮುಂದುವರಿಸಲು ಬಯಸಿರುವೆನೇ ಎನ್ನುವುದನ್ನು ಬಿಜೆಪಿಗೆ ಇನ್ನಷ್ಟೇ ತಿಳಿಸಬೇಕಾಗಿದೆ. ರಾಜ್ಯದಲ್ಲಿ ಸ್ಥಿರ ಸರಕಾರವನ್ನೊದಗಿಸಲು ಸಯೀದ್ 10 ತಿಂಗಳ ಹಿಂದೆ ಬಿಜೆಪಿಯೊಡನೆ ಮೈತ್ರಿಯನ್ನು ಮಾಡಿಕೊಂಡಿದ್ದರು. ಸೈದ್ಧಾಂತಿಕವಾಗಿ ವಿಭಿನ್ನ ನಿಲುವುಗಳನ್ನು ಹೊಂದಿರುವ ಈ ಪಕ್ಷಗಳ ಮೈತ್ರಿ ಮುಂದುವರಿಯುವ ಬಗ್ಗೆ ಆಗಿನಿಂದಲೇ ಊಹಾಪೋಹಗಳು ಕೇಳಿ ಬರುತ್ತಲೇ ಇದ್ದವು.


ಮುಂದೇನಾಗಲಿದೆ?

ಮೆಹಬೂಬ ಅವರು ಅವಸರದಲ್ಲಿ ಮುಖ್ಯಮಂತ್ರಿ ಗಾದಿಯನ್ನೇರಲು ಇಷ್ಟ ಪಡುತ್ತಿಲ್ಲ ಎನ್ನುವುದು ಈಗಿನ ಗೊಂದಲಮಯ ಸ್ಥಿತಿಯಲ್ಲಿ ಸ್ಪಷ್ಟವಾಗಿರುವ ಏಕೈಕ ಸಂಗತಿಯಾಗಿದೆ. ಇದು ಮೆಹಬೂಬ ಅವರ ವೌನದಲ್ಲಿ ಕಣ್ಣಿಗೆ ಕಾಣದ ಹಲವಾರು ವಿಷಯಗಳು ಅಡಗಿರಬಹುದು ಎಂಬ ಬಿಜೆಪಿ ಪಾಳೆಯದಲ್ಲಿನ ಶಂಕೆಯನ್ನು ಹೆಚ್ಚಿಸಿದೆ.
ತನ್ನ ಷರತ್ತುಗಳ ಮೇರೆಗೆ ಮೈತ್ರಿಕೂಟವನ್ನು ಮುಂದುವರಿಸಲು ಮೆಹಬೂಬ ಬಯಸುತ್ತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸರಕಾರ ರಚನೆಗಾಗಿ ಚರ್ಚಿಸಲು ಒಟ್ಟಿಗೆ ಕುಳಿತಾಗ ಕಠಿಣ ಷರತ್ತುಗಳನ್ನು ಮುಂದಿಡಲು ಅವರು ವೇದಿಕೆಯನ್ನು ಸಿದ್ಧಪಡಿಸಿಕೊಳ್ಳುತ್ತಿರಬಹುದು ಎಂದು ಬಿಜೆಪಿ ನಾಯಕರು ಶಂಕಿಸಿದ್ದಾರೆ. ಹಿಂದಿನ ಸರಕಾರದಲ್ಲಿ ಉಭಯ ಪಕ್ಷಗಳು ಹೊಂದಿದ್ದ ಖಾತೆಗಳ ವಿನಿಮಯದ ಮೇಲೂ ಮೆಹಬೂಬ ಕಣ್ಣಿರಿಸಿರಬಹುದು ಎನ್ನಲಾಗಿದೆ.

ತನ್ನ ತಂದೆ ಸಯೀದ್ ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರಾಗಲೀ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆಗಲೀ ಅವರನ್ನು ನೋಡಲು ಬಂದಿರಲಿಲ್ಲವೆಂಬ ಅಸಮಾಧಾನ ಮೆಹಬೂಬರನ್ನು ಕಾಡುತ್ತಿದೆ ಎನ್ನುವುದು ಮೂಲಗಳ ಹೇಳಿಕೆ. ಅದೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಎರಡು ಬಾರಿ ಆಸ್ಪತ್ರೆಗೆ ತೆರಳಿ ಸಯೀದ್‌ರನ್ನು ಭೇಟಿಯಾಗಿದ್ದರು.

 ಸರಕಾರ ರಚನೆಯ ಸಂದರ್ಭ ಉಭಯ ಪಕ್ಷಗಳು ಒಪ್ಪಿಕೊಂಡಿದ್ದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಪ್ರಮುಖ ಅಂಶಗಳಲ್ಲೊಂದಾಗಿದ್ದ ಜಮ್ಮು-ಕಾಶ್ಮೀರಕ್ಕೆ ಪ್ಯಾಕೇಜ್ ಬಗ್ಗೆ ಬಿಜೆಪಿ ಶ್ರಮಿಸಿಲ್ಲ ಎಂದೂ ಪಿಡಿಪಿ ಅಸಮಾಧಾನಗೊಂಡಿದೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News