ಪಾಕ್ ನಂಬಿಕೆಗೆ ಅರ್ಹ: ರಾಜನಾಥ್
ಪಠಾಣ್‌ಕೋಟ್ ದಾಳಿಯ ತನಿಖೆ ಗ್ರೇಟರ್ ನೊಯ್ಡ,ಜ.12: ಪಠಾಣ್‌ಕೋಟ್ ದಾಳಿಯ ರೂವಾರಿಗಳ ಬಗ್ಗೆ ಭಾರತವು ಒದಗಿಸಿರುವ ಮಾಹಿತಿಗಳ ಆಧಾರದಲ್ಲಿ ತಾನು ಪರಿಣಾಮಕಾರಿ ಕ್ರಮವನ್ನು ಕೈಗೊಳ್ಳುವುದಾಗಿ ಪಾಕಿಸ್ತಾನದ ಭರವಸೆಯನ್ನು ನಂಬದಿರಲು ಯಾವುದೇ ಸಕಾರಣಗಳಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಇಲ್ಲಿ ಹೇಳಿದರು.
ಪಾಕಿಸ್ತಾನವು ಭಾರತ ಸರಕಾರಕ್ಕೆ ಭರವಸೆಯನ್ನು ನೀಡಿರುವುದರಿಂದ ಇಷ್ಟು ಬೇಗನೆ ಅವರನ್ನು ನಂಬದಿರಲು ಸಕಾರಣಗಳಿಲ್ಲ ಎಂದರು.
ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಭಯೋತ್ಪಾದಕ ದಾಳಿಯ ಬಳಿಕ ಭಾರತವು ದಾಳಿಕೋರರು ಸಂಪರ್ಕಿಸಿದ್ದ ಪಾಕಿಸ್ತಾನದ ದೂರವಾಣಿ ಸಂಖ್ಯೆ ಮತ್ತು ಇತರ ಮಾಹಿತಿಗಳನ್ನು ಪಾಕ್‌ಗೆ ಒದಗಿಸಿತ್ತು. ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್‌ನ ಮುಖ್ಯಸ್ಥ ಮಸೂದ್ ಅಝರ್‌ನನ್ನು ದಾಳಿಯ ಮುಖ್ಯ ರೂವಾರಿ ಎಂದು ಭಾರತವು ಗುರುತಿಸಿದೆ. ಆತನ ಸೋದರ ರವೂಫ್ ಮತ್ತು ಇತರ ಐವರತ್ತಲೂ ಅದು ಬೆಟ್ಟು ಮಾಡಿದೆ. ಜ.2ರಂದು ನಡೆದಿದ್ದ ದಾಳಿಯಲ್ಲಿ ಏಳು ಭಾರತೀಯ ಯೋಧರು ಹುತಾತ್ಮರಾಗಿದ್ದಲ್ಲದೆ, ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಎಲ್ಲ ಆರೂ ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದರು.
ಜ.15ರಂದು ನಿಗದಿಯಾಗಿರುವ ಉಭಯ ರಾಷ್ಟ್ರಗಳ ನಡುವಿನ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ನಡೆಯಬೇಕಾದರೆ ತಾನು ಒದಗಿಸಿರುವ ಮಾಹಿತಿಗಳ ಆಧಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಭಾರತವು ಪಾಕ್‌ಗೆ ಷರತ್ತು ವಿಧಿಸಿದೆ.
ಪಠಾಣ್‌ಕೋಟ್ ದಾಳಿಗೆ ಸಂಬಂಧಿಸಿದಂತೆ ಮಸೂದ್ ತವರೂರು ಬಹಾವಲ್‌ಪುರ ಜಿಲ್ಲೆಯ ಕೆಲವರನ್ನು ಪಾಕಿಸ್ತಾನದ ಭದ್ರತಾ ಸಂಸ್ಥೆಗಳು ವಶಕ್ಕೆ ತೆಗೆದುಕೊಂಡಿವೆ ಎಂದು ಸೋಮವಾರ ಪಾಕ್ ಮೂಲಗಳು ವರದಿ ಮಾಡಿದ್ದವು.