ಗಡ್ಡ ಬೋಳಿಸದೇ ಧರಣಿ: ಕೊನೆಗೂ ಮಣಿದ ಸರಕಾರ
ಪಣಜಿ,ಜ.12: ದಕ್ಷಿಣ ಗೋವಾದ ಕಾಣಕೋಣ ತಾಲೂಕಿನಲ್ಲಿ ತಾಲ್ಪೋನಾ ಮತ್ತು ಗಾಳಗಿಬಾಗಾ ನದಿಗಳಿಗೆ ಸೇತುವೆಗಳು ನಿರ್ಮಾಣಗೊಳ್ಳುವವರೆಗೆ ಗಡ್ಡವನ್ನು ಬೋಳಿಸಿಕೊಳ್ಳದಿರುವ ಪ್ರತಿಜ್ಞೆಯನ್ನು ಮಾಡಿದ್ದ ಕಾಣಕೋಣದ ಲೊಲೆಂ ನಿವಾಸಿ ಮಹೇಶ ವಾರಿಕ್(37) ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚಿಗೆ ಈ ಸೇತುವೆಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ತನ್ನ ಮೂರು ವರ್ಷಗಳ ವಿಶಿಷ್ಟ ಪ್ರತಿಭಟನೆಗೆ ಅಂತ್ಯ ಹಾಡಿದ್ದಾರೆ.
ವೃತ್ತಿಯಲ್ಲಿ ವ್ಯಾಪಾರಿಯಾಗಿರುವ ಬಿಜೆಪಿಯ ಕಟ್ಟಾ ಬೆಂಬಲಿಗ ವಾರಿಕ್ 2012ರಲ್ಲಿ ರಾಜ್ಯದಲ್ಲಿ ಪಕ್ಷವು ಅಧಿಕಾರಕ್ಕೆ ಬಂದಾಗ ತನ್ನ ಪ್ರತಿಭಟನೆಯನ್ನು ಆರಂಭಿಸಿದ್ದರು. ವಿದ್ಯಾರ್ಥಿಗಳು ಸೇರಿದಂತೆ ಸ್ಥಳೀಯರು ಸೇತುವೆಗಳಿಲ್ಲದೆ ಸುತ್ತು ಬಳಸಿಕೊಂಡು ತಮ್ಮ ಕೆಲಸಕಾರ್ಯಗಳಿಗೆ ಹೋಗಬೇಕಾದ ಸ್ಥಿತಿಯಿಲ್ಲಿದೆ.
ಜ.2ರಂದು ಗಡ್ಕರಿಯವರು ಈ ಸೇತುವೆಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಉಪಸ್ಥಿತರಿದ್ದ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು, ಸೇತುವೆಗಳಿಗೆ ಅಡಿಗಲ್ಲು ಹಾಕಲಾಗಿದೆ. ನಾಯ್ಕಿ ಅವರು ಈಗ ಸೆಲೂನಿಗೆ ತೆರಳಿ ಗಡ್ಡವನ್ನು ಬೋಳಿಸಿಕೊಳ್ಳಬಹುದು ಎಂದು ಪ್ರಕಟಿಸಿದ್ದರು.
ಗಡ್ಕರಿಯವರು ಶಿಲಾನ್ಯಾಸ ಫಲಕವನ್ನು ಅನಾವರಣಗೊಳಿಸುವ ಮುನ್ನ ದಕ್ಷಿಣ ಗೋವಾ ಸಂಸದ ನರೇಂದ್ರ ಸವಾಯಿಕರ್ ಅವರೂ ವಾರಿಕ್‌ರನ್ನು ಮತ್ತು ಅವರ ಪ್ರತಿಭಟನೆಯನ್ನು ತನ್ನ ಭಾಷಣದಲ್ಲಿ ಪ್ರಸ್ತಾಪಿಸಿದ್ದರು.
ಶಿಲಾನ್ಯಾಸದ ಸುದ್ದಿ ಕೇಳಿದ ತಕ್ಷಣ ನಾನು ಸೆಲೂನಿಗೆ ತೆರಳಿ ಗಡ್ಡವನ್ನು ಬೋಳಿಸಿಕೊಂಡೆ. ಅಡಿಗಲ್ಲು ಬಿದ್ದಿದೆ ಎಂದ ಮೇಲೆ ಸಹಜವಾಗಿಯೇ ಸೇತುವೆಗಳು ಪೂರ್ಣಗೊಳ್ಳುತ್ತವೆ. ನಾವು ಸರಕಾರವನ್ನು ಅಷ್ಟಾದರೂ ನಂಬಬೇಕು ಎಂದು ವಾರಿಕ್ ತನ್ನನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದರು. ಅಂದ ಹಾಗೆ ಮೂರು ವರ್ಷಗಳಲ್ಲಿ ವಾರಿಕ್‌ರ ಗಡ್ಡ ಹೊಟ್ಟೆಯವರೆಗೆ ಇಳಿದಿತ್ತು!
ಗಡ್ಕರಿ ಅವರು 7.74 ಕಿ.ಮೀ.ಉದ್ದದ ಬೈಪಾಸ್‌ಗೆ ಶಿಲಾನ್ಯಾಸ ನೆರವೇರಿಸಿದ್ದು, ಇದರಲ್ಲಿ ತಾಲ್ಪೋನಾ,ಗಾಳಗಿಬಾಗಾ ಮತ್ತು ಮಾಷೆಂ ಸೇತುವೆಗಳು ಸೇರಿವೆ.