ಕೈಗಾರಿಕಾ ಉತ್ಪಾದನೆ ಕುಸಿತ, ರಿಟೇಲ್ ಹಣದುಬ್ಬರ ಏರಿಕೆ
ಹೊಸದಿಲ್ಲಿ, ಜ.12: ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಭಾರತದ ಕೈಗಾರಿಕಾ ಉತ್ಪಾದನಾ ಚಟುವಟಿಕೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದರೂ, ನವೆಂಬರ್‌ನಲ್ಲಿ ಗಣನೀಯ ಇಳಿಕೆಯಾಗಿರುವುದನ್ನು ಅಧಿಕೃತ ಅಂಕಿಅಂಶಗಳು ಬಹಿರಂಗಪಡಿಸಿವೆ. ಇದರ ಜೊತೆಗೆ ಡಿಸೆಂಬರ್‌ನಲ್ಲಿ ರಿಟೇಲ್ ಸಾಮಗ್ರಿಗಳ ವಾರ್ಷಿಕ ಹಣದುಬ್ಬರ ದರವು 5.61ಕ್ಕೆ ಏರುವ ಮೂಲಕ ಇನ್ನೊಂದು ಆಘಾತ ನೀಡಿದೆ.
ಕಳೆದ ನವೆಂಬರ್‌ನಲ್ಲಿ ದೇಶದ ಕಾರ್ಖಾನೆಗಳ ಒಟ್ಟು ಉತ್ಪಾದನೆಯಲ್ಲಿ ಶೇ.3.19ರಷ್ಟು ಇಳಿಕೆಯಾಗಿರುವುದನ್ನು ಕೇಂದ್ರ ಅಂಕಿಅಂಶ ಕಾರ್ಯಾಲಯವು ಬಿಡುಗಡೆಗೊಳಿಸಿರುವ ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಪಿಪಿ)ದ ದತ್ತಾಂಶಗಳು ತೋರಿಸಿವೆ. ಉತ್ಪಾದನಾ ಚಟುವಟಿಕೆಯಲ್ಲಿ ಶೇ. -4.4 ಇಳಿಕೆಯಾಗಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲು ಏಳು ತಿಂಗಳುಗಳಲ್ಲಿ 4.8ರಷ್ಟಿದ್ದ ದೇಶದ ಕಾರ್ಖಾನೆಯ ಉತ್ಪಾದನಾ ದರವು, ಎಂಟನೆ ತಿಂಗಳಲ್ಲಿ 3.9 ಶೇ.ಕ್ಕೆ ಕುಸಿದಿದೆ.
ವರ್ಷದ ಕೊನೆಯವರೆಗೂ ಧವಸಧಾನ್ಯಗಳು ತುಟ್ಟಿಯಾಗಿಯೇ ಉಳಿದವು. ನವೆಂಬರ್‌ನಲ್ಲಿ 5.41 ಶೇ. ದಷ್ಟಿದ್ದ ದೇಶದ ರಿಟೇಲ್ ಸಾಮಗ್ರಿಗಳ ಹಣದುಬ್ಬರವು ಡಿಸೆಂಬರ್‌ನಲ್ಲಿ5.61ಕ್ಕೇರಿದೆ.
ದವಸಧಾನ್ಯಗಳ ದರಗಳಲ್ಲಿ 2014ರಲ್ಲಿ ಇದ್ದುದಕ್ಕಿಂತ 45.92 ಶೇ.ದಷ್ಟು ಏರಿಕೆಯಾಗಿರುವುದನ್ನು ಅಧಿಕೃತ ಅಂಕಿಅಂಶಗಳು ತೋರಿಸಿಕೊಟ್ಟಿವೆ.