ಜಲ್ಲಿಕಟ್ಟು:ಸುಗ್ರೀವಾಜ್ಞೆಗೆ ಜಯಲಲಿತಾ ಆಗ್ರಹ
ಚೆನ್ನೈ,ಜ.12: ಜಲ್ಲಿಕಟ್ಟು ಕ್ರೀಡೆಗೆ ಮಧ್ಯಾಂತರ ತಡೆಯಾಜ್ಞೆ ನೀಡಿ ಮಂಗಳವಾರ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದ ಬೆನ್ನಿಗೇ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದು, ರಾಜ್ಯದಲ್ಲಿ ಪೊಂಗಲ್ ಸಂದರ್ಭದಲ್ಲಿ ಈ ಸಾಂಪ್ರದಾಯಿಕ ಕ್ರೀಡೆಯನ್ನು ನಡೆಸಲು ಸಾಧ್ಯವಾಗುವಂತೆ ಸುಗ್ರೀವಾಜ್ಞೆಯನ್ನು ಹೊರಡಿಸುವಂತೆ ಆಗ್ರಹಿಸಿದ್ದಾರೆ.
ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ಕಲ್ಪಿಸಿ ಕೇಂದ್ರ ಪರಿಸರ ಸಚಿವಾಲಯವು ಹೊರಡಿಸಿದ್ದ ಅಧಿಸೂಚನೆಗೆ ಸರ್ವೋಚ್ಚ ನ್ಯಾಯಾಲಯವು ಮಧ್ಯಾಂತರ ತಡೆಯಾಜ್ಞೆಯನ್ನು ನೀಡಿದೆ. ಹೀಗಾಗಿ ಜಲ್ಲಿಕಟ್ಟು ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ವಿಷಯದ ತುರ್ತು ಅಗತ್ಯವನ್ನು ಪರಿಗಣಿಸಿ ಸುಗ್ರೀವಾಜ್ಞೆಯನ್ನು ಹೊರಡಿಸುವಂತೆ ತಾನು ಈ ಹಿಂದೆ ಕೇಂದ್ರ ಸರಕಾರಕ್ಕೆ ಮಾಡಿಕೊಂಡಿದ್ದ ಮನವಿಯನ್ನು ಪುನರುಚ್ಚರಿಸುತ್ತಿದ್ದೇನೆ. ಈ ವಿಷಯದಲ್ಲಿ ತಕ್ಷಣ ಕ್ರಮವನ್ನು ಕೈಗೊಳ್ಳುವಂತೆ ತಾನು ತಮಿಳುನಾಡು ಜನತೆಯ ಪರವಾಗಿ ಆಗ್ರಹಿಸುತ್ತಿದ್ದೇನೆ ಎಂದು ಜಯಲಲಿತಾ ಪತ್ರದಲ್ಲಿ ಹೇಳಿದ್ದಾರೆ.