ಕಾರ್ಕಳ: ಪ.ಜಾತಿ, ಪಂಗಡದ ಕುಂದುಕೊರತೆ ಸಭೆ
ಕಾರ್ಕಳ, ಜ.12: ಪಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯು ತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕಾರ್ಕಳ ತಾಲೂಕು ಕಚೇರಿಯಲ್ಲಿ ನಡೆದ ಪ.ಜಾತಿ, ಪಂಗಡದ ಜನತೆಯ ಕುಂದುಕೊರತೆ ಸಭೆಯಲ್ಲಿ ಕೇಳಿ ಬಂತು.
ಅರಣ್ಯ ಹಕ್ಕು ಕಾಯ್ದೆಡಿ ಹಕ್ಕುಪತ್ರ ಪಡೆದಿರುವ ಫಲಾನು ಭವಿಗಳಿಗೆ ಸವಲತ್ತು ಒದಗಿಸುವಲ್ಲಿ ಸಹಕರಿಸುವಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ಶ್ರೀಧರ ಗೌಡ ಹೇಳಿದರು.
ಪುರಸಭೆಯ ಪ್ರವಾಸಿ ಮಂದಿರವನ್ನು ಅಂಬೇಡ್ಕರ್ ಭವನವಾಗಿ ನಿರ್ಮಾಣಕ್ಕೆ ನೀಡಬೇಕು ಎಂದು ರಮೇಶ್ ಪೆರ್ವಾಜೆ ಒತ್ತಾಯಿಸಿದರು. ಕ್ಷೇತ್ರ ತಹಶೀಲ್ದಾರ್ ರಾಘವೇಂದ್ರ ಎಸ್. ಅಧ್ಯಕ್ಷತೆ ವಹಿಸಿದ್ದರು. ಪುರಸಭೆಯ ರಣವೀರ ಕಾಲನಿಯಲ್ಲಿ ದಲಿತ ಕುಟುಂಬದ ಒಂದೇ ಮನೆಗೆ ಮೂರು ಶೌಚಾಲಯ ಮಂಜೂ ರಾಗಿದ್ದು, ಈ ಹಿಂದಿನ ಅವಧಿಯಲ್ಲಿ ಭಾರೀ ಅವ್ಯವಹಾರ ಆಗಿದೆ ಎಂದು ಮೋಹನ್ ರಾಣೆ ಆರೋಪಿಸಿದರು.
ದೇವರಗುಡ್ಡೆ ಬಳಿ ಟ್ಯಾಂಕ್ ನಿರ್ಮಾಣಗೊಂಡು 20 ವರ್ಷಗಳು ಕಳೆದಿದ್ದು, ಇದೀಗ ಆ ಟ್ಯಾಂಕ್‌ನಿಂದ ನೀರು ನೀಡಲಾಗುತ್ತಿದೆ. ಅದು ಬೀಳುವ ಭೀತಿಯಿದ್ದು, ನಮ್ಮ ದಲಿತ ಕಾಲನಿಗೆ ನೀರು ಬೇಡ. ಈ ಬಗ್ಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂದು ಅಣ್ಣಪ್ಪ ನಕ್ರೆ ಆರೋಪಿಸಿದರು. ಕಿಂಡಿ ಅಣೆಕಟ್ಟು ನಿರ್ಮಾಣ ಅವ್ಯವಹಾರಕ್ಕೆ ದಾರಿ ಮಾಡಿಕೊಡುತ್ತಿದ್ದು, ಅದರ ಸಮರ್ಪಕ ಬಳಕೆಯಾಗುತ್ತಿಲ್ಲ. ಹೊಳೆಯಲ್ಲಿ ನೀರು ಸರಾಗವಾಗಿ ಹರಿದುಹೋಗಲು ಕಳೆಗಳಿಂದ ತೊಂದರೆಯಾಗುತ್ತಿದ್ದು, ಅದನ್ನು ಶುಚಿಗೊಳಿಸಬೇಕು ಎಂದು ಅಣ್ಣಪ್ಪನಕ್ರೆ ಹೇಳಿದರು.
ದಲಿತರ ಹೆಸರಿನಲ್ಲಿ ಗುರುತು ಚೀಟಿ ಮಾಡಿ, ಭಾವಚಿತ್ರ ಅಂಟಿಸಿ ಬ್ಯಾಂಕ್ ಖಾತೆಯಿಂದ ಹಣ ಪಡೆಯುವ ಮೂಲಕ ಎಪಿಎಂಸಿಯಿಂದ ಅನ್ಯಾಯವೆಸಗಲಾಗಿದೆ. ಈ ಬಗ್ಗೆ ಕಳೆದ ಸಭೆಯಲ್ಲೂ ಪ್ರಸ್ತಾಪಿಸಿದ್ದೇನೆ ಎಂದು ಶ್ರೀನಿವಾಸ ಕಾರ್ಲ ಹೇಳಿದರು.
ಸಮಾಜ ಕಲ್ಯಾಣ ಅಧಿಕಾರಿ ಎಸ್.ವಿಜಯ ಕುಮಾರ್ ಕುಮಾರ್ ಮಾತನಾಡಿ, ಈ ಬಗ್ಗೆ ಎಪಿಎಂಸಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದೇವೆ. ‘ಹೊರಗುತ್ತಿಗೆಯನ್ನು ಪಡೆದುಕೊಂಡವರು ಅನ್ಯಾಯವೆಸಗಿದ್ದು, ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಶ್ರೀನಿವಾಸ ಕಾರ್ಲ ಮಾತನಾಡಿ, ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುವವರು ಎಪಿಎಂಸಿಯಲ್ಲೇ ಇರುವುದರಿಂದ ಅಧಿಕಾರಿಗಳ ಆ ಉತ್ತರ ತೃಪ್ತಿಕರವಲ್ಲ ಎಂದರು. ನಿಟ್ಟೆ ಅಂಬಡೆಕಲ್ಲು ಬಳಿ ಮರ ತೆರವು ಮಾಡಿದ್ದು, ದಲಿತ ಕುಟುಂಬಗಳಿಗೆ ಅನ್ಯಾಯ ಮಾಡಲಾಗಿದೆ. ಈವರೆಗೆ ಅರಣ್ಯಾಧಿಕಾರಿಗಳು ಸ್ಪಂದಿಸಿಲ್ಲ. ಮರದ ವ್ಯಾಪಾರಿಗಳ ಜೊತೆ ವ್ಯವಹಾರದಲ್ಲಿ ನಿರತರಾಗಿರುವ ಅರಣ್ಯ ಇಲಾಖೆಯ ಸಿಬ್ಬಂದಿಗೆ ದಲಿತರ ಬಗ್ಗೆ ಕಾಳಜಿಯಿಲ್ಲ ಎಂದು ಧರ್ಮಣ್ಣ ನಿಟ್ಟೆ ಆರೋಪಿಸಿದರು.
ಕ್ಷೇತ್ರ ತಹಶೀಲ್ದಾರ್ ರಾಘವೇಂದ್ರ ಎಸ್. ಅಧ್ಯಕ್ಷತೆ ವಹಿಸಿ ದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪಮೊಯ್ಲಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.