×
Ad

‘ದೋಣಿ ಹಸ್ತಾಂತರ: ಗ್ರಾಪಂಗೆ ಮಾಹಿತಿಯೇ ಇಲ್ಲ’

Update: 2016-01-12 23:53 IST

ಉಡುಪಿ, ಜ.12: ಹಾವಂಜೆ ಗ್ರಾಪಂಗೆ ದೋಣಿ ಹಸ್ತಾಂತರ ವಿವಾದದಲ್ಲಿ ಗ್ರಾಪಂನ ಯಾವುದೇ ತಪ್ಪಿಲ್ಲ. ದೋಣಿ ಹಸ್ತಾಂತರದ ಕುರಿತಂತೆ ಜ.1ರಂದು ತ್ರಿವರ್ಣ ವಿಶ್ವವೇದಿಕೆ ಕಾರ್ಯಕ್ರಮದಲ್ಲಿ ದೋಣಿ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಅಥವಾ ಶಾಸಕರಿಂದ ನಮಗೆ ಯಾವುದೇ ಸೂಚನೆ ಅಥವಾ ಪತ್ರ ಬಂದಿಲ್ಲ ಎಂದು ಹಾವಂಜೆ ಗ್ರಾಪಂನ ಮಾಜಿಅಧ್ಯಕ್ಷ ಹಾಗೂ ಹಾಲಿ ಸದಸ್ಯ ಉದಯ ಕೋಟ್ಯಾನ್ ಸ್ಪಷ್ಟಪಡಿಸಿದ್ದಾರೆ.

ಹಾವಂಜೆ ಗ್ರಾಪಂನ ಹಾಲಿ ಅಧ್ಯಕ್ಷೆ ವಸಂತಿ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಮಂಗಳವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರಿವರ್ಣ ವಿಶ್ವ ವೇದಿಕೆಯ ಅಧ್ಯಕ್ಷ ಸತೀಶ್ ಪೂಜಾರಿ ಪ್ರತಿದಿನ ಪಂಚಾಯತ್ ಬಗ್ಗೆ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಗ್ರಾಪಂನ 8 ಮಂದಿ ಬಿಜೆಪಿ ಹಾಗೂ 2 ಕಾಂಗ್ರೆಸ್ ಬೆಂಬಲಿತ ಸದಸ್ಯರು ಒಗ್ಗಟ್ಟಿನಿಂದ, ಪಕ್ಷಭೇದವಿಲ್ಲದೇ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತಿದ್ದೇವೆ ಎಂದರು.

ಹಾವಂಜೆ ಗ್ರಾಪಂಗೆ ಪ್ರಾಕೃತಿಕ ವಿಕೋಪ ಯೋಜನೆಯಡಿ ದೋಣಿ ಮಂಜೂರಾಗಿರುವ ಬಗ್ಗೆ ಯಾವುದೇ ಮಾಹಿತಿಯಾಗಲಿ, ಆದೇಶವಾಗಲಿ ಬಂದಿಲ್ಲ. ಅಲ್ಲದೇ ಪಂಚಾಯತ್‌ನಿಂದ ದೋಣಿಗಾಗಿ ಶಿಫಾರಸು ಪತ್ರ ಸಹ ಕೇಳಿರಲಿಲ್ಲ. ಕಳೆದ ಡಿ.11ರಂದು ವೇದಿಕೆ ದೋಣಿ ಹಸ್ತಾಂತರ ಹಾಗೂ ರಸಮಂಜರಿ ಕಾರ್ಯಕ್ರಮಕ್ಕೆ ಅನುಮತಿ ಕೋರಿ ಅರ್ಜಿ ನೀಡಿದಾಗಲೇ ನಮಗೆ ವಿಷಯ ಗೊತ್ತಾಗಿದೆ ಎಂದರು. ಡಿ.20ರಂದು ತಹಶೀಲ್ದಾರರು ಗ್ರಾಪಂಗೆ ಪತ್ರ ಬರೆದು ದೋಣಿಯನ್ನು ಪಂಚಾಯತ್ ವಶಕ್ಕೆ ಪಡೆಯುವಂತೆ ತಿಳಿಸಿದ್ದರು.

ಅದರಂತೆ ದೋಣಿಯನ್ನು ಪಡೆದುಕೊಳ್ಳಲು ಡಿ.30ರಂದು ಪಿಡಿಒ, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತೆರಳಿದಾಗ, ಮಲ್ಪೆಯ ಯೋಗೀಶ್ ಉಲ್ಲಾಳ್‌ರಿಂದ ಪಡೆಯುವಂತೆ ಸೂಚಿಸಲಾಯಿತು. ಆದರೆ ಯೋಗೀಶ್ ಅವರು ಸತೀಶ್ ಪೂಜಾರಿ ಬಂದರೆ ಮಾತ್ರ ದೋಣಿ ನೀಡುವುದಾಗಿ ತಿಳಿಸಿದರು ಎಂದು ಉದಯ ಕೋಟ್ಯಾನ್ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜ.1ರಂದು ಮತ್ತೆ ತಹಶೀಲ್ದಾರ್‌ರ ಬಳಿ ತೆರಳಿ ಸಂಜೆಯವರೆಗೆ ಕಾದರೂ ದೋಣಿಯನ್ನು ನೀಡಲಿಲ್ಲ. ಸಂಜೆ ನಡೆದ ಕಾರ್ಯಕ್ರಮದಲ್ಲಿ ದೋಣಿ ಸ್ವೀಕರಿಸುವಂತೆ ನಮಗೆ ಯಾರಿಂದಲೂ ಆದೇಶ ಬಂದಿರಲಿಲ್ಲ. ಹೀಗಾಗಿ ದೋಣಿಯನ್ನು ತಾಲೂಕು ಕಚೇರಿಯಲ್ಲಿ ತಂದಿರಿಸಲಾಗಿದೆ. ಇದೀಗ ಜ.7ರಂದು ತಾಪಂನ ಇಒ ದೋಣಿಯನ್ನು ಗ್ರಾಪಂ ವಶಕ್ಕೆ ಪಡೆದುಕೊಳ್ಳುವಂತೆ ಪಿಡಿಒ ಅವರಿಗೆ ಆದೇಶ ನೀಡಿದ್ದಾರೆ. ಇದರಂತೆ ಜ.11ರಂದು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಪಿಡಿಒ ಅವರೊಂದಿಗೆತಾಲೂಕು ಕಚೇರಿಗೆ ತೆರಳಿ ದೋಣಿಯನ್ನು ಗ್ರಾಪಂಗೆ ಪಡೆಯಲಾಗಿದೆ.

ಇದೀಗ ದೋಣಿಯನ್ನು ಹಾವಂಜೆ ಗ್ರಾಮದ ಸ್ವರ್ಣ ನದಿ ತಟದಲ್ಲಿ ಇಡಲಾಗಿದೆ. ಜನರಿಗೆ ಅದರ ಸೇವೆ ಲಭ್ಯವಿರುವಂತೆ ನೋಡಿಕೊಳ್ಳಲಾಗಿದೆ. ದೋಣಿಯನ್ನು ಗ್ರಾಮಕ್ಕೆ ಒದಗಿಸಿದ ಶಾಸಕ ಪ್ರಮೋದ್ ಮಧ್ವರಾಜ್, ಜಿಲ್ಲಾಡಳಿತ ಹಾಗೂ ತಹಶೀಲ್ದಾರ್‌ಗೆ ಗ್ರಾಮದ ಸಮಸ್ತರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಉದಯ ಕೋಟ್ಯಾನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಪಂ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಸದಸ್ಯರಾದ ಸಂಪಾ, ಸತ್ಯನಾರಾಯಣ ಆಚಾರ್ಯ, ರಜನಿ ರಾಮಚಂದ್ರ ನಾಯಕ್, ಸುಮತಿ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News