ಚೆನ್ನರಾಯಪಟ್ಟಣ ಸಮೀಪ ರಸ್ತೆ ಅಪಘಾತ; ಪೆರ್ಣಂಕಿಲದ ದಂಪತಿ ಮೃತ್ಯು, ಮಕ್ಕಳು ಪಾರು
ಉಡುಪಿ, ಜ.12: ಹಾಸನ ಜಿಲ್ಲೆ ಚೆನ್ನರಾಯಪಟ್ಟಣ ತಾಲೂಕಿನ ಚಿಕ್ಕಗೊಂಡನ ಹಳ್ಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಂಗಳವಾರ ಬೆಳಗ್ಗೆ ನ್ಯಾನೋ ಕಾರೊಂದು ಪಲ್ಟಿಯಾಗಿ ಪಕ್ಕದ ಗದ್ದೆಗೆ ಉರುಳಿದ ಪರಿಣಾಮ ಕಾರಿನಲ್ಲಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟು, ಅವರ ಮಕ್ಕಳಿಬ್ಬರು ಆಸ್ಪತ್ರೆಗೆ ದಾಖಲಾದ ಹೃದಯವಿದ್ರಾವಕ ಘಟನೆ ವರದಿಯಾಗಿದೆ.
ಮೃತ ದಂಪತಿಗಳನ್ನು ಉಡುಪಿ ಜಿಲ್ಲೆಯ ಆತ್ರಾಡಿ ಸಮೀಪದ ಪೆರ್ಣಂಕಿಲದ ಅಶೋಕ್ ಪ್ರಭು (45) ಹಾಗೂ ಅವರ ಪತ್ನಿ ಅಶ್ವಿನಿ ಪ್ರಭು(35) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಅವರ ಇಬ್ಬರು ಮಕ್ಕಳಾದ ಆದರ್ಶ ಪ್ರಭು (10) ಹಾಗೂ ಅನನ್ಯ ಪ್ರಭು (8) ಗಂಭೀರವಾಗಿ ಗಾಯಗೊಂಡಿದ್ದು, ಚೆನ್ನರಾಯ ಪಟ್ಟಣದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಕಾನ್ವೆಂಟ್ರಿಕ್ಸ್ ಕಂಪೆನಿಯಲ್ಲಿ ಹಿರಿಯ ಐಟಿ ಕನ್ಸಲ್ಟೆಂಟ್ ಆಗಿರುವ ಅಶೋಕ್ ಪ್ರಭು ಪೆರ್ಣಂಕಿಲದ ರಾಮಚಂದ್ರ ಪ್ರಭು ಅವರ ಪುತ್ರರಾಗಿದ್ದು, ಕುಟುಂಬದೊಂದಿಗೆ ರಜೆಯನ್ನು ಊರಿನಲ್ಲಿ ಕಳೆದು, ಕಳೆದ ರಾತ್ರಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಮಂಗಳವಾರ ಬೆಳಗ್ಗೆ ಘಟನೆ ನಡೆದಿದೆ. ಈ ಬಗ್ಗೆ ಹಿರಿಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.