ಫರಂಗಿಪೇಟೆ: ಹೆದ್ದಾರಿ ಜಾಗ ಒತ್ತುವರಿ ತೆರವು

Update: 2016-01-12 18:26 GMT

ಬಂಟ್ವಾಳ, ಜ.12: ಫರಂಗಿಪೇಟೆ ಜಂಕ್ಷನ್‌ನಲ್ಲಿ ಹೆದ್ದಾರಿ ಜಾಗವನ್ನು ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿದ್ದ ವಿವಿಧ ಅಂಗಡಿಗಳನ್ನು ಮಂಗಳವಾರ ಸಂಜೆ ಕಾರ್ಯಾಚರಣೆ ನಡೆಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತೆರವುಗೊಳಿಸಿದರು. ಫರಂಗಿಪೇಟೆ ಜಂಕ್ಷನ್‌ನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹೆದ್ದಾರಿ ಜಾಗವನ್ನು ಅತಿಕ್ರಮಿಸಿ ಗೂಡಂಗಡಿ, ಫಾಸ್ಟ್‌ಫುಡ್, ಹೊಟೇಲ್, ಬಟ್ಟೆ ಅಂಗಡಿ, ಹಣ್ಣುಹಂಪಲು ಅಂಗಡಿ, ಗುಜರಿ ಅಂಗಡಿ, ಕಟ್ಟಡ ನಿರ್ಮಾಣದ ಸಾಮಗ್ರಿಗಳ ಅಂಗಡಿಗಳು ಕಾರ್ಯಾ ಚರಿಸುತ್ತಿದ್ದವು. ಇದರಿಂದ ತೊಂದ ರೆಗಳಾಗುತ್ತಿರುವ ಬಗ್ಗೆ ಸಾರ್ವಜನಿಕರು ಹೆದ್ದಾರಿ ಪ್ರಾಧಿಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿ ದ್ದರು. ಈ ದೂರುಗಳ ಹಿನ್ನೆಲೆಯಲ್ಲಿ, ಎಲ್ಲ ಅಕ್ರಮ ವ್ಯಾಪಾರಿಗಳಿಗೆ ಹೆದ್ದಾರಿ ಇಲಾಖೆ ನೋಟಿಸ್ ನೀಡಿ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿತ್ತು. ಅಲ್ಲದೆ, ಎರಡು ಮೂರು ಬಾರಿ ಎಚ್ಚರಿಕೆಯನ್ನೂ ನೀಡಿತ್ತು. ಆದರೂ ಒತ್ತುವರಿ ತೆರವುಗೊಳಿಸದೇ ಇರುವುದರಿಂದ ಇಂದು ಗ್ರಾಮಾಂತರ ಪೊಲೀಸರ ನೆರವಿನೊಂದಿಗೆ ಹಾಗೂ ಜೆಸಿಬಿ ಯಂತ್ರದೊಂದಿಗೆ ಸ್ಥಳಕ್ಕೆ ಬಂದ ಅಧಿಕಾರಿಗಳು ತೆರವಿಗೆ ಮುಂದಾದರು. ಈ ವೇಳೆ ಕೆಲವು ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಸ್ವಯಂ ಆಗಿ ತೆರವುಗೊಳಿಸಿದರು. ಅಲ್ಲದೆ, ಬಸ್‌ನಿಲ್ದಾಣದ ಸಮೀಪ ಪಾರ್ಕಿಂಗ್ ಮಾಡಿದ್ದ ದ್ವಿಚಕ್ರ ವಾಹನಗಳನ್ನು ಪೊಲೀಸರು ಲಾರಿಗೆ ತುಂಬಿಸಿ ಕೊಂಡೊಯ್ದರು.

ಸ್ವಯಂ ತೆರವಿಗೆ ಎರಡು ದಿನಗಳ ಗಡುವು
ಮಂಗಳೂರು-ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಜಾಗವನ್ನು ಅಕ್ರಮಿಸಿ ವ್ಯಾಪಾರ ನಡೆಸುತ್ತಿರುವ ಎಲ್ಲ ವ್ಯಾಪಾರಿಗಳು ಇನ್ನೆರಡು ದಿನಗಳೊಳಗೆ ಸ್ವಯಂ ಆಗಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಪೊಲೀಸರ ನೆರವಿನೊಂದಿಗೆ ಜೆಸಿಬಿ ಮೂಲಕ ತೆರವುಗೊಳಿಸಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಭಾವಕ್ಕೆ ಮಣಿಯದ ಅಧಿಕಾರಿಗಳು
ಒತ್ತುವರಿ ತೆರವಿನ ವೇಳೆ ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕ ಎ.ಕೆ.ರಕ್ಷಿತ್‌ರೊಂದಿಗೆ ಕೆಲವು ವ್ಯಾಪಾರಿಗಳು ವಾಗ್ವಾದಕ್ಕಿಳಿದರು. ಕೆಲವರು ಪ್ರಭಾವಿಗಳಿಂದ ದೂರವಾಣಿ ಕರೆ ಮಾಡಿಸಿ, ತೆರವು ಕಾರ್ಯಾಚರಣೆ ಸ್ಥಗಿತ ಗೊಳಿಸಲು ಒತ್ತಡ ಹೇರುವ ಪ್ರಯತ್ನ ಮಾಡಿದರು. ಆದರೆ ಇದ್ಯಾವುದಕ್ಕೂ ಬಗ್ಗದ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News