ಜಿಪಂ, ತಾಪಂ ಚುನಾವಣೆ ಮುಂದೂಡಲು ರಾಜ್ಯ ಸರಕಾರ ಹುನ್ನಾರ: ಯಡಿಯೂರಪ್ಪ

Update: 2016-01-12 18:55 GMT

ಉಡುಪಿ, ಜ.12: ಮುಂದಿನ ತಿಂಗಳು ನಡೆಯ ಬೇಕಿದ್ದ ಜಿಪಂ ಹಾಗೂ ತಾಪಂ ಚುನಾವಣೆಯನ್ನು ಮುಂದೂಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಉಡುಪಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದ ಕಳೆದ ಎರಡು-ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂಬ ಭಯ ಮುಖ್ಯಮಂತ್ರಿಗಿದೆ. ಗ್ರಾಮೀಣಾಭಿವೃದ್ಧಿ ಹಣ ಬಿಡುಗಡೆಯಾಗಿಲ್ಲ. ಈ ಭಯದಿಂದಲೇ ಚುನಾವಣೆ ಮುಂದೂಡಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದರು.

ರಾಜ್ಯದ ಉಪಲೋಕಾಯುಕ್ತರಾಗಿರುವ ಸುಭಾಷ್ ಅಡಿ ಅವರನ್ನು ಪದಚ್ಯುತಗೊಳಿಸಲು ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ. ಇದರಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಬಲಿಪಶುವಾಗಿದ್ದಾರೆ. ಈ ಬೆಳವಣಿಗೆಗಳಿಂದ ನಿವೃತ್ತ ನ್ಯಾಯಾೀಶರು ಲೋಕಾಯುಕ್ತಕ್ಕೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ಇದೆ. ರಾಜ್ಯದ ಲೋಕಾಯುಕ್ತ ವ್ಯವಸ್ಥೆ ಯನ್ನೇ ಬುಡಮೇಲು ಮಾಡಲು, ತಮಗೆ ಬೇಕಾದವರನ್ನು ನೇಮಿಸುವ ಪ್ರಯತ್ನ ನಡೆದಿದೆ. ಇಂದು ಸುಭಾಶ್ ಅಡಿ ಅವರ ಕುರಿತು ಕಾಗೋಡು ಹೇಳಿರುವುದನ್ನು ನಾನು ಖಂಡಿಸುತ್ತೇನೆ ಎಂದರು.

ಸುವರ್ಣ ಗ್ರಾಮ ಯೋಜನೆಯ ಬದಲು ಗ್ರಾಮ ವಿಕಾಸ ಯೋಜನೆಯನ್ನು ಜಾರಿಗೊಳಿಸಿದೆ. ರಾಜ್ಯದ 1,000 ಹಳ್ಳಿಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಇದಾಗಿದೆ. ಇದಕ್ಕಾಗಿ 180 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಸರಕಾರ ಹೇಳುತ್ತಿದ್ದರೂ, ಗ್ರಾಮಗಳ ಆಯ್ಕೆ ಪಟ್ಟಿ ಇನ್ನೂ ಸಿದ್ಧವಾಗಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ನಾಯಕರಾದ ಸುರೇಶ್ ಶೆಟ್ಟಿ ಗುರ್ಮೆ, ಶ್ಯಾಮಲಾ ಕುಂದರ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News