ಸೇನಾ ನೇಮಕಾತಿಗೂ ಡೋಪ್ ಟೆಸ್ಟ್!
ದೇಶದ ಸೇನಾ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸೇನಾ ನೇಮಕಾತಿ ರ್ಯಾಲಿಯಲ್ಲಿ ಉದ್ದೀಪನ ಔಷಧಿ ಸೇವನೆ ಕುರಿತು ತಪಾಸಣೆ ನಡೆಸಲು ನಿರ್ಧರಿಸಲಾಗಿದೆ. ಫೆಬ್ರವರಿ 19ರಿಂದ 28ರವರೆಗೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆಯುವ ಸೇನಾ ನೇಮಕಾತಿ ರ್ಯಾಲಿಯಲ್ಲಿ ಇದನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ ಎಂದು ಸೇನೆ ಹೇಳಿದೆ.
"ಉದ್ಯೋಗಾಕಾಂಕ್ಷಿ ಯುವಕರು ಇಂಥ ರ್ಯಾಲಿಗಳಲ್ಲಿ ಭಾಗವಹಿಸುವ ಮುನ್ನ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ನಿಷೇಧಿತ ಉದ್ದೀಪನ ಔಷಧಗಳನ್ನು ಸೇವಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ" ಎಂದು ವಿಭಾಗೀಯ ನೇಮಕಾತಿ ಅಧಿಕಾರಿ ಕರ್ನಲ್ ಜೆ,ಎಸ್ಸ್.ಗೊಂದಾರ ಹೇಳಿದ್ದಾರೆ. ತಪಾಸಣೆಯಲ್ಲಿ ಯಾರಾದರೂ ಸಿಕ್ಕಿಬಿದ್ದರೆ ಅವರನ್ನು ರ್ಯಾಲಿಯಲ್ಲಿ ಪಾಲ್ಗೊಳ್ಳದಂತೆ ತಡೆಯಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ಮೊದಲ ಬಾರಿಗೆ ಆಕಾಂಕ್ಷಿಗಳಿಂದ ಕೇವಲ ಆನ್‌ಲೈನ್ ಅರ್ಜಿಗಳನ್ನಷ್ಟೇ ಸ್ವೀಕರಿಸಲಾಗುತ್ತಿದೆ. ಯಾವುದೇ ಮುದ್ರಿತ ಅರ್ಜಿಗಳನ್ನಾಗಲೀ, ಕೈಬರಹ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ ಎಂದು ಅವರು ವಿವರಿಸಿದ್ದಾರೆ.