12 ಕೋಟಿ ರೂ. ವೆಚ್ಚದಲ್ಲಿ ದ.ಕ. ಜಿಲ್ಲಾ ಅಂಬೇಡ್ಕರ್ ಭವನ
ಮಂಗಳೂರು, ಜ.13: ನಗರದ ದೇರೆಬೈಲ್ ಬಳಿ ದ.ಕ. ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನವು 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಸರಕಾರದಿಂದ 9.60 ಕೋಟಿ ರೂ.ಗಳ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಸರಕಾರದಿಂದ ಅನುಮೋದನೆ ದೊರೆತಾಕ್ಷಣ ಕಟ್ಟಡ ಕಾಮಗಾರಿ ಆರಂಭಗೊಳ್ಳಲಿದೆ ಎಂದು ದ.ಕ. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಡಾ. ಸಂತೋಷ್ ಕುಮಾರ್ ತಿಳಿಸಿದ್ದಾರೆ. ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ದಲಿತರ ಕುಂದುಕೊರತೆಗಳ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ದೇರಬೈಲ್‌ನ 1.61 ಎಕರೆ ಪ್ರದೇಶದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಕರ್ನಾಟಕ ಗೃಹ ಮಂಡಳಿಯ 12 ಕೋಟಿ ರೂ.ಗಳ ನೀಲ ನಕ್ಷೆಯನ್ನು ತಯಾರಿಸಿದೆ. ಅದರ ಪ್ರಕಾರ 1000 ಜನರು ಏಕಕಾಲದಲ್ಲಿ ಆಸೀನರಾಗಬಲ್ಲ ಸಭಾಂಗಣದಿಂದ ಕೂಡಿದ ತಳಮಹಡಿ, ನೆಲಮಹಡಿ ಹಾಗೂ ಪ್ರಥಮ ಮಹಡಿಯನ್ನು ಒಳಗೊಂಡ 2731.37 ಚದರ ಮೀಟರ್ ವಿಸ್ತೀರ್ಣದ ಕಟ್ಟಡ ನಿರ್ಮಾಣವಾಗಲಿದೆ. ತಳ ಅಂತಸ್ತಿನಲ್ಲಿ 800 ಜನರು ಆಸೀನರಾಗುವ ಸಭಾಂಗಣ, 2 ಗ್ರೀನ್ ರೂಂ, ಶೌಚಾಲಯಗಳು, ನೆಲ ಮಹಡಿಯಲ್ಲಿ 200 ಜನರು ಆಸೀನರಾಗಬಲ್ಲ ಬಾಲ್ಕನಿ, ಸೆಮಿನಾರ್ ಸಭಾಂಗಣ, 25 ಲಕ್ಷ ಪುಸ್ತಕಗಳನ್ನು ಇರಿಸಬಲ್ಲ ರ್ಯಾಕ್‌ಗಳನ್ನು ಹೊಂದಿದ ಗ್ರಂಥಾಲಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯನ್ನು ಹೊಂದಲಿದೆ.
ಪ್ರಥಮ ಮಹಡಿಯಲ್ಲಿ ಬಾಲ್ಕನಿ ನಿರ್ಮಾಣವಾಗಲಿದೆ. ಈ ಯೋಜನೆಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ 2.40 ಕೋಟಿ ರೂ. ಬಿಡುಗಡೆಯಾಗಿದ್ದು, ಮನಪಾದಿಂದ 1 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಳಿದ 9.60 ಕೋಟಿ ರೂ.ಗಳ ಅನುದಾನಕ್ಕಾಗಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಸರಕಾರದ ಸಚಿವ ಸಂಪುಟದಿಂದ ಅನುಮೋದನೆ ದೊರೆಯಬೇಕಿದೆ ಎಂದು ಡಾ. ಸಂತೋಷ್ ಕುಮಾರ್ ವಿವರ ನೀಡಿದರು.