×
Ad

ವಿಶ್ವ ದಾಖಲೆ ನಿರ್ಮಿಸುವತ್ತ ಸಾನಿಯಾ-ಮಾರ್ಟಿನಾ ಜೋಡಿ:

Update: 2016-01-13 18:17 IST

ಮಹಿಳೆಯರ ಡಬಲ್ಸ್‌ನಲ್ಲಿ ಸತತ 28ನೆ ಜಯ

 ಸಿಡ್ನಿ, ಜ.13: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಹಾಗೂ ಸ್ವಿಸ್‌ನ ಮಾರ್ಟಿನಾ ಹಿಂಗಿಸ್ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸತತ 28ನೆ ಗೆಲುವು ಸಾಧಿಸುವ ಮೂಲಕ ವಿಶ್ವ ದಾಖಲೆಯನ್ನು ಸರಿಗಟ್ಟಿದರು. ಹೊಸ ದಾಖಲೆ ನಿರ್ಮಿಸಲು ಇನ್ನು ಒಂದೇ ಮೆಟ್ಟಿಲು ಏರಬೇಕಾಗಿದೆ.

ಬುಧವಾರ ಇಲ್ಲಿ ನಡೆದ ಡಬ್ಲುಟಿಎ ಸಿಡ್ನಿ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸಾನಿಯಾ ಹಾಗೂ ಮಾರ್ಟಿನಾ ಚೀನಾದ ಚೆನ್ ಲಿಯಾಂಗ್ ಹಾಗೂ ಶುವಾಯಿ ಪೆಂಗ್‌ರನ್ನು 6-2, 6-3 ನೇರ ಸೆಟ್‌ಗಳಿಂದ ಮಣಿಸಿ ಸೆಮಿಫೈನಲ್‌ಗೆ ತಲುಪಿದ್ದಲ್ಲದೆ ಸುದೀರ್ಘ ಗೆಲುವಿನ ವಿಶ್ವ ದಾಖಲೆಯನ್ನು ಸರಿಗಟ್ಟಿದರು.

ಸತತ 28ನೆ ಗೆಲುವು ದಾಖಲಿಸಿರುವ ಸಾನಿಯಾ ಹಾಗೂ ಮಾರ್ಟಿನಾ 1994ರಲ್ಲಿ ಪೋರ್ಟರಿಕದ ಗಿಗಿ ಫೆರ್ನಾಂಡಿಸ್ ಹಾಗೂ ಬೆಲಾರಿಸ್‌ನ ನಟಾಶಾ ಝ್ವೆರೇವಾ ನಿರ್ಮಿಸಿದ್ದ ವಿಶ್ವ ದಾಖಲೆಯ ಸಾಧನೆಯನ್ನು ಸರಿಗಟ್ಟಿದರು. ಸಾನಿಯಾ-ಮಾರ್ಟಿನಾ 29ನೆ ಪಂದ್ಯವನ್ನು ಜಯಿಸಿದರೆ ಹೊಸ ವಿಶ್ವ ದಾಖಲೆ ನಿರ್ಮಾಣವಾಗಲಿದೆ.

 ವಿಶ್ವದ ನಂ.1 ಜೋಡಿ ಸಾನಿಯಾ ಹಾಗೂ ಮಾರ್ಟಿನಾ ಚೀನಾ ಆಟಗಾರ್ತಿಯರ ವಿರುದ್ಧ ಸುಲಭ ಜಯ ಸಾಧಿಸಿ ಸೆಮಿ ಫೈನಲ್‌ಗೆ ತಲುಪಿದ್ದು, ಈ ವರ್ಷ ಸತತ ಎರಡನೆ ಪ್ರಶಸ್ತಿ ಗೆಲ್ಲುವತ್ತ ಚಿತ್ತವಿರಿಸಿದ್ದಾರೆ. ಸಾನಿಯಾ ಜೋಡಿ ಕಳೆದ ವಾರ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೂರ್ನಿಯನ್ನು ಜಯಿಸುವ ಮೂಲಕ 2016ರ ಋತುವನ್ನು ಶುಭಾರಂಭ ಮಾಡಿತ್ತು.

 2015ರಲ್ಲಿ ಸಾನಿಯಾ-ಮಾರ್ಟಿನಾ ಜೋಡಿ 9 ಡಬ್ಲುಟಿಎ ಪ್ರಶಸ್ತಿಗಳನ್ನು ಜಯಿಸಿತ್ತು. ಅವುಗಳೆಂದರೆ, ಇಂಡಿಯನ್ ವೆಲ್ಸ್, ಮಿಯಾಮಿ, ಚಾರ್ಲ್ಸ್‌ಸ್ಟನ್, ವಿಂಬಲ್ಡನ್, ಯುಎಸ್ ಓಪನ್, ಗ್ವಾಂಗ್‌ಝೌ, ವುಹಾನ್, ಬೀಜಿಂಗ್ ಹಾಗೂ ಡಬ್ಲ್ಯುಟಿಎ ಫೈನಲ್ಸ್.

ಕಳೆದ ವರ್ಷ ಎಪ್ರಿಲ್‌ನಲ್ಲಿ ಮಾರ್ಟಿನಾರೊಂದಿಗೆ ಡಬ್ಲ್ಯುಟಿಎ ಫ್ಯಾಮಿಲಿ ಸರ್ಕಲ್ ಕಪ್‌ನ್ನು ಜಯಿಸಿದ್ದ ಸಾನಿಯಾ ಹೊಸ ಇತಿಹಾಸ ರಚಿಸಿದ್ದರು. ಮಹಿಳೆಯರ ಡಬಲ್ಸ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು.

ಸಾನಿಯಾ-ಮಾರ್ಟಿನಾ ಜೋಡಿಯ ಸಾಧನೆಯ ಐದು ಸ್ವಾರಸ್ಯಕರ ಅಂಶಗಳು;

1. ಸಾನಿಯಾ 2015ರಲ್ಲಿ ತೈವಾನ್‌ನ ಸೀ ಸು-ವೀ ಅವರೊಂದಿಗಿನ ಜೊತೆಯಾಟವನ್ನು ತೊರೆದು ಸ್ವಿಸ್ ದಂತಕತೆ ಮಾರ್ಟಿನಾ ಹಿಂಗಿಸ್‌ರೊಂದಿಗೆ ಕೈ ಜೋಡಿಸಿದರು.

 2. ಕಳೆದ ವರ್ಷದ ಎಪ್ರಿಲ್‌ನಲ್ಲಿ ಮಾರ್ಟಿನಾರೊಂದಿಗೆ ಡಬ್ಲ್ಯುಟಿಎ ಫ್ಯಾಮಿಲಿ ಸರ್ಕಲ್ ಕಪ್‌ನ್ನು ಜಯಿಸಿದ ಸಾನಿಯಾ ಹೊಸ ಇತಿಹಾಸ ನಿರ್ಮಿಸಿದರು. ಮಹಿಳೆಯರ ಡಬಲ್ಸ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿಯಾಗಿ ಹೊರ ಹೊಮ್ಮಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡರು.

3. 2015ನೆ ವರ್ಷ ಇಂಡೋ-ಸ್ವಿಸ್ ಜೋಡಿ ಸಾನಿಯಾ-ಮಾರ್ಟಿನಾಗೆ ಯಶಸ್ವಿ ವರ್ಷವಾಗಿ ಪರಿಣಮಿಸಿತು. ಸಾನಿಯಾ-ಮಾರ್ಟಿನಾ ಅವರು ವುಹಾನ್, ಗ್ವಾಂಗ್‌ಝೌ, ಯುಎಸ್ ಓಪನ್(ನ್ಯೂಯಾರ್ಕ್), ವಿಂಬಲ್ಡನ್(ಲಂಡನ್), ಚಾರ್ಲ್ಸ್‌ಸ್ಟನ್, ಮಿಯಾಮಿ ಹಾಗೂ ಇಂಡಿಯನ್ ವೆಲ್ಸ್ ಟೂರ್ನಿಗಳಲ್ಲಿ ಚಾಂಪಿಯನ್ ಆಗಿದ್ದರು. ಕೇವಲ ರೋಮ್ ಓಪನ್‌ನ ಫೈನಲ್‌ನಲ್ಲಿ ಎಡವಿದ್ದರು.

4. ಬ್ರಿಸ್ಬೇನ್‌ನ ಕ್ವೀನ್ಸ್‌ಲೆಂಡ್ ಟೆನಿಸ್ ಸೆಂಟರ್‌ನಲ್ಲಿ ನಡೆದ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ 1 ಬಿಲಿಯನ್ ಬಹುಮಾನ ಮೊತ್ತದ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಜಯಿಸುವುದರೊಂದಿಗೆ ಸಾನಿಯಾ ಹಾಗೂ ಮಾರ್ಟಿನಾ 2016ರ ಋತುವನ್ನು ಗೆಲುವಿನೊಂದಿಗೆ ಆರಂಭಿಸಿದ್ದಾರೆ.

5. ಲಂಡನ್‌ನಲ್ಲಿ ಸ್ವಿಸ್ ಜೊತೆಗಾರ್ತಿ ಮಾರ್ಟಿನಾ ಹಿಂಗಿಸ್‌ರೊಂದಿಗೆ ವಿಂಬಲ್ಡನ್ ಕಿರೀಟವನ್ನು ಧರಿಸಿದ್ದ ಸಾನಿಯಾ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಮಹಿಳೆಯರ ಡಬಲ್ಸ್ ಪ್ರಶಸ್ತಿ ಜಯಿಸಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News