ಮೆಲ್ಕಾರ್ ವುಮೆನ್ಸ್ ಕಾಲೇಜು ವಾರ್ಷಿಕೋತ್ಸವ
ಮುಸ್ಲಿಮ್ ಸಮುದಾಯದ ಪರಿಸ್ಥಿತಿ ಸುಧಾರಣೆಗೆ ಶಿಕ್ಷಣವೇ ಪರಿಹಾರ: ರಿಯಾಝ್ ಖಾನ್
ಬಂಟ್ವಾಳ,ಜ.13:ಮುಸ್ಲಿಮ್ ಸಮುದಾಯದಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದರೂ ಅವರು ಸೂಕ್ತ ಪ್ರೋತ್ಸಾಹ ಹಾಗೂ ತರಬೇತಿಯ ಕೊರತೆಯನ್ನು ಎದುರಿಸುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿಣಿಗೆ ಬರಲು ಒಗ್ಗೂಡಿ ಶ್ರಮಿಸಬೇಕಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅಬ್ದುಲ್ ರಿಯಾಝ್ ಖಾನ್ ಹೇಳಿದರು. ಮೆಲ್ಕಾರ್ ವುಮೆನ್ಸ್ ಪಿಯು ಮತ್ತು ಪದವಿ ಕಾಲೇಜಿನ ವಾರ್ಷಿಕ ದಿನಾಚರಣೆಯ ಪ್ರಯುಕ್ತ ಬುಧವಾರ ಕಾಲೇಜಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದ ಜನಸಂಖ್ಯೆಯಲ್ಲಿ ಶೇ.15ರಷ್ಟು ಮುಸ್ಲಿಮರಿದ್ದರೂ ವಿಧಾನ ಸಭೆಯಲ್ಲಿ ಕೇವಲ 8 ಮಂದಿ ಸದಸ್ಯರಿದ್ದಾರೆ. ಮುಸ್ಲಿಮರಿಗಿಂತ ಶೇ.1ರಷ್ಟು ಹೆಚ್ಚಿರುವ ಲಿಂಗಾಯತರು 110 ಮಂದಿ ಇದ್ದಾರೆ. ರಾಜ್ಯದ 1.10 ಲಕ್ಷ ವಕೀಲರಲ್ಲಿ ಮುಸ್ಲಿಮ್ ವಕೀಲರ ಸಂಖ್ಯೆ ಕೇವಲ 8 ಸಾವಿರವಾಗಿದೆ. ಅವರಲ್ಲಿ 1,200 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದವರು ವೃತ್ತಿಯಿಂದ ದೂರ ಉಳಿದ್ದಾರೆ.
ರಾಜ್ಯದ 14 ಸಾವಿರ ಮಹಿಳಾ ವಕೀಲರ ಪೈಕಿ 3,00 ಮಂದಿ ಮಾತ್ರ ಮುಸ್ಲಿಮ್ ಮಹಿಳಾ ವಕೀಲರಿದ್ದಾರೆ. ಅವರಲ್ಲಿಯೂ ಹೆಚ್ಚಿನವರು ವೃತ್ತಿಯಲ್ಲಿ ತೊಡಗಿಸಿಲ್ಲ ಎಂದು ರಿಯಾಝ್ ಖಾನ್ ತಿಳಿಸಿದರು. ರಾಜ್ಯದ ಹೈಕೋರ್ಟ್‌ನಲ್ಲಿ ಕೇವಲ ಒಬ್ಬ ಮುಸ್ಲಿಮ್ ಮಾತ್ರ ನ್ಯಾಯಮೂರ್ತಿಯಾಗಿದ್ದಾರೆ. 28 ವರ್ಷಗಳಿಂದ ಒಬ್ಬನೇ ಒಬ್ಬ ಮುಸ್ಲಿಮ್ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗಿಲ್ಲ. ರಾಜ್ಯದ 2,800ಕ್ಕೂ ಹೆಚ್ಚು ನ್ಯಾಯಧೀಶರಲ್ಲಿ ಕೇವಲ 20 ಮಂದಿ ಮಾತ್ರ ಮುಸ್ಲಿಮರಿದ್ದಾರೆ ಎಂದು ಖೇದ ವ್ಯಕ್ತಪಡಿಸಿದ ಅವರು, ಐಎಎಸ್ ಮತ್ತು ಐಪಿಎಸ್‌ನಂತಹ ಸ್ಪರ್ಧಾತ್ಮಕ ಹುದ್ದೆಗಳಲ್ಲೂ ಮುಸ್ಲಿಮ್ ಸಮುದಾಯದ ಸ್ಥಿತಿ ಎಸ್ಸಿ-ಎಸ್ಟಿಗಿಂತಳೂ ಕೀಳುಮಟ್ಟದಲ್ಲಿದೆ ಎಂದ ರಿಯಾಝ್ ಖಾನ್, ಬದಲಾದ ಕಾಲಘಟ್ಟದಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಡಾಕ್ಟರ್, ಎಂಜಿನಿಯರ್ ಆಗುವ ಬದಲು ವಕೀಲ, ನ್ಯಾಯಾಧೀಶ, ಐಎಎಸ್, ಐಪಿಎಸ್ ಅಧಿಕಾರಿಗಳಾಗುವಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು. ಮುಸ್ಲಿಮ್ ಸಮುದಾಯದ ಪರಿಸ್ಥಿತಿ ಸುಧಾರಿಸಬೇಕಾದರೆ ಶಿಕ್ಷಣ ಒಂದೇ ಪರಿಹಾರವಾಗಿದೆ.
2009ರಲ್ಲಿ 40 ಮಕ್ಕಳಿಂದ ಆರಂಭವಾದ ಮೆಲ್ಕಾರ್ ವುಮೆನ್ಸ್ ಕಾಲೇಜು ಐದು ವರ್ಷದಲ್ಲಿ 7,00 ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನಿಯವಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಜಮೀಯತುಲ್ ಫಲಾಹ್ ದ.ಕ., ಉಡುಪಿ ಜಿಲ್ಲಾ ಖಜಾಂಚಿ ಇಮ್ತಿಯಾಝ್ ಅಹ್ಮದ್ ಖತೀಬ್, ಮಂಗಳೂರು ಹಿದಾಯ ಫೌಂಡೇಶನ್ ಸಂಸ್ಥಾಪಕಾಧ್ಯಕ್ಷ ಎಚ್.ಕೆ. ಖಾಸಿಮ್ ಅಹ್ಮದ್, ಕೆಕೆಎಂಎ ಕರ್ನಾಟಕ ರಾಜ್ಯ ಕೋರ್ಡಿನೇಟರ್ ಎಸ್.ಎಂ.ಫಾರೂಕ್, ಕಾಲೇಜಿನ ಅಧ್ಯಕ್ಷರೂ ಆದ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಪ್ರಾಂಶುಪಾಲ ಅಬ್ದುಲ್ಲತೀಫ್, ಎಸ್. ಅಬ್ಬಾಸ್ ಹಾಜಿ ಸಜಿಪ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿ ಫಾತಿಮಾ ಬೇಗಂ ಕಿರಾಅತ್ ಪಠಿಸಿದರು. ಝುಹೈರಾ ಮತ್ತು ತಂಡದ ಸದಸ್ಯರು ಹಾಡಿದರು. ವಿದ್ಯಾರ್ಥಿನಿ ಮರಿಯಮ್ ಆಬಿದಾ ಸ್ವಾಗತಿಸಿದರು. ನಶತ್ ನಿದಾ ವಂದಿಸಿದರು. ವಿದ್ಯಾರ್ಥಿನಿ ನೌಶಿನಾ ಬಾನು ಕಾರ್ಯಕ್ರಮ ನಿರೂಪಿದರು.