ಸಿಡಿಮದ್ದು ಸ್ಫೋಟ: ಗಾಯಾಳು ಮಹಿಳೆ ಮೃತ್ಯು
ಮಂಗಳೂರು ಜನವರಿ 13: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊರಕಂಬಳದ ಮನೆಯೊಂದರಲ್ಲಿ ಸಂಗ್ರಹಿಸಿದ್ದ ಸಿಡಿಮದ್ದುಗಳಿಗೆ ಬೆಂಕಿ ತಗುಲಿ ಸ್ಫೋಟಗೊಂಡ ಪರಿಣಾಮ ಗಂಭೀರ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊರ್ವರು ಮೃತಪಟ್ಟಿದ್ದಾರೆ.
ಮೃತ ಮಹಿಳೆಯನ್ನು ಕೊರಕಂಬಳದ ಸಿರಾಜ್ ಎಂಬವರ ಪತ್ನಿ ಶಾಹಿರಾ (35) ಎಂದು ಗುರುತಿಸಲಾಗಿದೆ.
ಸಿರಾಜ್ ಎಂಬವರು ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮಗಳಿಗೆ ಪಟಾಕಿಗಳನ್ನು ಪೂರೈಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಬಳಕೆಯಾಗದ ಬಚ್ಚಲು ಕೋಣೆಯಲ್ಲಿ ಸಿಡಿಮದ್ದುಗಳನ್ನು ಸಂಗ್ರಹಿಸಿಟ್ಟಿದ್ದರು ಎಂದು ಹೇಳಲಾಗಿದೆ. ಬುಧವಾರ ರಾತ್ರಿ ಸಿರಾಜ್ ಮನೆಯಿಂದ ಹೊರ ಹೋಗಿದ್ದ ಸಂದರ್ಭದಲ್ಲಿ ಪಟಾಕಿಗೆ ಬೆಂಕಿ ತಗುಲಿದೆ ಎಂದು ಹೇಳಲಾಗಿದ್ದು, ಪರಿಣಾಮವಾಗಿ ಸಿಡಿಮದ್ದು ಸ್ಫೋಟಗೊಂಡು ಶಾಹಿರಾ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ ಸಂಭವಿಸಿದ ಸಿಡಿಮದ್ದು ಸ್ಫೋಟದ ಸದ್ದಿಗೆ ಸ್ಥಳೀಯರು ಗಾಬರಿಗೊಂಡು ತಮ್ಮ ಮನೆಗಳಿಂದ ಹೊರಬಂದಿದ್ದು, ಕೆಲವು ಕ್ಷಣ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಘಟನೆಯಲ್ಲಿ ಮನೆಯ ಗೋಡೆಗಳು, ಮೇಲ್ಛಾವಣಿ ಬಿರುಕು ಬಿಟ್ಟಿದ್ದು, ಸಂಗ್ರಹಿಸಿಟ್ಟಿದ್ದ ಪಟಾಕಿಗಳು ಬೆಂಕಿಗಾಹುತಿಯಾಗಿವೆ.
ಈ ಬಗ್ಗೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.