×
Ad

ಬೃಹತ್ ಗಾತ್ರದ ಪ್ರಾಚೀನ ಮೊಸಳೆ ಪಳೆಯುಳಿಕೆ ಪತ್ತೆ

Update: 2016-01-13 19:35 IST

ವಾಶಿಂಗ್ಟನ್, ಜ. 13: ಟ್ಯುನೀಶಿಯದಲ್ಲಿ ಉತ್ಖನನ ನಡೆಸುತ್ತಿರುವ ಪ್ರಾಖ್ತನಶಾಸ್ತ್ರಜ್ಞರು ಮಹತ್ವದ ಸಂಶೋಧನೆಯೊಂದನ್ನು ನಡೆಸಿದ್ದಾರೆ. ಇದುವರೆಗೆ ಗೊತ್ತಿರದ, ಜಗತ್ತಿನ ಅತಿ ದೊಡ್ಡ ಸಾಗರವಾಸಿ ಮೊಸಳೆಯೊಂದನ್ನು ಪತ್ತೆಹಚ್ಚಿದ್ದಾರೆ.
ಇತಿಹಾಸಪೂರ್ವ ಕಾಲಕ್ಕೆ ಸೇರಿದ್ದೆನ್ನಲಾದ ಈ ಮೊಸಳೆ 30 ಅಡಿಗಿಂತಲೂ ಉದ್ದವಿತ್ತು ಹಾಗೂ ಮೂರು ಟನ್ (3,000 ಕೆಜಿ) ತೂಗುತ್ತಿತ್ತು ಎಂದು ಅಂದಾಜಿಸಲಾಗಿದೆ. ಅದರ ತಲೆಬುರುಡೆಯೇ ಐದು ಅಡಿಗಿಂತಲೂ ಉದ್ದವಿದೆ.
ಈ ನೂತನ ತಳಿಯ ಮೊಸಳೆಗೆ ಸಂಶೋಧಕರು ‘ಮ್ಯಾಕಿಮೋಸರಸ್ ರೆಕ್ಸ್’ ಎಂಬುದಾಗಿ ಹೆಸರಿಟ್ಟಿದ್ದಾರೆ ಹಾಗೂ ತಮ್ಮ ಸಂಶೋಧನೆಯನ್ನು ಈ ವಾರದ ‘ಕ್ರೆಟಾಶಿಯಸ್ ರಿಸರ್ಚ್’ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ.
ಸಂಶೋಧನಾ ವರದಿಯ ಪ್ರಧಾನ ಲೇಖಕ ಹಾಗೂ ಬೋಲೊಗ್ನ ವಿಶ್ವವಿದ್ಯಾನಿಲಯದ ಫೆಡರಿಕೊ ಫಾಂಟಿ, ಈ ಮೊಸಳೆಯನ್ನು ‘‘ಬೃಹತ್’’ ಎಂಬುದಾಗಿ ಬಣ್ಣಿಸಿದ್ದಾರೆ. ‘‘ಅದು ಬೃಹತ್ತಾಗಿತ್ತು. ಬಹುತೇಕ ಒಂದು ಬಸ್‌ನ ಗಾತ್ರ ಹೊಂದಿತ್ತು’’ ಎಂದು ಅವರು ವಿವರಿಸಿದ್ದಾರೆ.
‘‘ಅದು ಖಂಡಿತವಾಗಿಯೂ ಆ ಕಾಲದ ಆಹಾರ ಸರಣಿಯ ತುತ್ತ ತುದಿಯಲ್ಲಿತ್ತು’’ ಎಂದು ಅವರು ಹೇಳುತ್ತಾರೆ.
ನ್ಯಾಶನಲ್ ಜಿಯಾಗ್ರಫಿಕ್ ಸೊಸೈಟಿ ಕಮಿಟಿ ಫಾರ್ ರಿಸರ್ಚ್ ಆ್ಯಂಡ್ ಎಕ್ಸ್‌ಪ್ಲೊರೇಶನ್‌ನ ಸಹಭಾಗಿತ್ವದಲ್ಲಿ ಫಾಂಟಿ ಮತ್ತು ಅವರ ತಂಡ, ಟ್ಯುನೀಶಿಯದ ಸಹಾರ ಮರುಭೂಮಿಯ ತುದಿಯಲ್ಲಿ ಕೆಲವೇ ಕೆಲವು ಇಂಚುಗಳ ಅಡಿಯಲ್ಲಿ ಸಮಾಧಿಯಾಗಿದ್ದ ಮೊಸಳೆಯ ಪಳೆಯುಳಿಕೆಯನ್ನು ಪತ್ತೆಹಚ್ಚಿದರು. ಟ್ಯುನೀಶಿಯ ಪಳೆಯುಳಿಕೆಯ ಸಮೃದ್ಧ ದೇಶವಾಗಿದೆ.
ಈ ಸಂಶೋಧನೆ ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ಮಹತ್ವದ್ದಾಗಿದೆ. ಈ ಮೊಸಳೆಯ ತಳಿ ಸುಮಾರು 15 ಕೋಟಿ ವರ್ಷಗಳ ಹಿಂದೆ, ಅಂದರೆ ಜುರಾಸಿಕ್ ಅವಧಿಯ ಕೊನೆಯ ವೇಳೆಗೆ ಅಳಿದಿತ್ತು ಎಂದು ಈ ತನಕ ಭಾವಿಸಲಾಗಿತ್ತು. ಆದರೆ, ಈ ನಿರ್ದಿಷ್ಟ ಮೊಸಳೆ ಸುಮಾರು 13 ಕೋಟಿ ವರ್ಷಗಳ ಹಿಂದೆ ಜೀವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News