×
Ad

ನೀವು ಹೇಗೆ ಪಿಐಎಲ್‌ಗಳ ಕೇಂದ್ರವಾಗ ಬಲ್ಲಿರಿ? ಪ್ರಶಾಂತ ಭೂಷಣ್‌ಗೆ ಸು.ಕೋರ್ಟ್ ತರಾಟೆ

Update: 2016-01-13 23:47 IST

ಹೊಸದಿಲ್ಲಿ, ಜ.13: ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ದಾಖಲಿಸುವುದೇ ಒಂದು ಸರಕಾರೇತರ ಸಂಘಟನೆ ಅಥವಾ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಸಂಚಾಲಕತ್ವದ ‘ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್’ನಂತಹ (ಸಿಪಿಐಎಲ್) ವೃತ್ತಿಪರ ಸಂಸ್ಥೆಯ ಏಕೈಕ ಚಟುವಟಿಕೆ ಹೇಗಾಗುತ್ತದೆ? ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಶ್ನಿಸಿದೆ.

ಅಂತರ್ಜಾಲದ ಉದ್ದೇಶಕ್ಕಾಗಿ ಕಡಿಮೆ ಬೆಲೆಯಲ್ಲಿ 4ಜಿ ಸ್ಪೆಕ್ಟ್ರಂ ನೀಡಿ, ಬಳಿಕ ಧ್ವನಿ ಟೆಲಿಫೋನಿಗೆ ಪರಿವರ್ತಿಸಲಾಗಿದೆಯೆಂಬ ನೆಲೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಜಿಯೋಗೆ 4ಜಿ ಸ್ಪೆಕ್ಟ್ರಂ ಮಂಜೂರಾತಿಯನ್ನು ಪ್ರಶ್ನಿಸಿರುವ ಸಿಪಿಐಎಲ್‌ನ ಅಧಿಕೃತತೆಯನ್ನು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್, ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಹಾಗೂ ಭಾನುಮತಿಯವರನ್ನೊಳಗೊಂಡ ಪೀಠವೊಂದು ಪ್ರಶ್ನಿಸಿತು.
‘ಪ್ರಶಾಂತ ಭೂಷಣರೇ, ನೀವೊಬ್ಬ ಹೋರಾಟಗಾರನ ವರ್ಚಸ್ಸು ಹೊಂದಿದ್ದೀರಿ. ಆದರೆ, ನೀವು ಸಾರ್ವಜನಿಕ ಹಿತಾಸಕ್ತಿ ದೂರುಗಳ ಕೇಂದ್ರವಾಗ ಬಹುದೇ? ಈ ರೀತಿಯಲ್ಲಿ ವ್ಯವಸ್ಥೆಯ ಮೇಲೆ ಸವಾರಿ ಮಾಡಬಹುದೇ? ತಾವಿದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ದೂರುಗಳನ್ನು ಪರಿಶೀಲಿಸಿ. ಕೇವಲ ಆಧಾರಭೂತವಾದವುಗಳನ್ನು ಮಾತ್ರ ಸಾರ್ವಜನಿಕ ಹಿತಾಸಕ್ತಿ ದೂರುಗಳನ್ನಾಗಿ ಪರಿವರ್ತಿಸುವ ಸಮಿತಿಯನ್ನು ನೀವು ಹೊಂದಿದ್ದೇರೆಂಬ ಬಗ್ಗೆ ನಮಗೆ ಖಚಿತವಾಗಬೇಕು’’.
‘‘ಜಿಯೋ ಟೆಲಿಕಾಂನ ವಿಷಯವನ್ನು ಸಮಿತಿ ಪರಿಶೀಲಿಸಿದೆಯೇ? ಸಿಪಿಐಎಲ್ ಅರ್ಜಿಯೊಂದನ್ನು ಸಲ್ಲಿಸಿದಾಗ ಉದ್ದೇಶವು ನಿಷ್ಕಳಂಕಿತವೆಂದು ಕಾಣಿಸಿದಾಗಲೂ ಅದು ಯಾವುದೋ ಸ್ಥಾಪಿತ ಹಿತಾಸಕ್ತಿಯಿಂದ ಪ್ರೇರಿತವಾದುದಲ್ಲವೆಂದು ನಮಗೆ ವಿಶ್ವಾಸ ಮೂಡಬೇಕು. ಒಂದು ಕಾರ್ಪೊರೇಟ್ ಪ್ರತಿಪಕ್ಷ ಪಿಐಎಲ್ ಸಲ್ಲಿಸಲು ದಾಖಲೆ ನೀಡಿದರೆ ನೀವದನ್ನು ಮಾಡುವಿರಾ? ಆ ಕಾರ್ಪೊರೇಟ್ ಮೂಲವೇ ಬಹಿರಂಗವಾಗಿ ಬಂದು ತನ್ನದೇ ಹೆಸರಿನಲ್ಲಿ ಮೊಕದ್ದಮೆಯನ್ನು ಯಾಕೆ ಮುಂದುವರಿಸುವುದಿಲ್ಲ? ಕಾರ್ಪೊರೇಟ್ ವೈಷಮ್ಯ ಅಥವಾ ವೈಯಕ್ತಿಕ ಪ್ರತಿಕಾರ ತೀರಿಸಲು ಸಿಪಿಐಎಲ್ ಏಕೆ ಗುರಾಣಿಯಾಗಬೇಕೇ? ಸಿಪಿಐಎಲ್ ಛದ್ಮ ದೂರುದಾರನಾಗಬಾರದು. ಅದು ವಾಣಿಜ್ಯ ಸಂಸ್ಥೆಗಳ ಕೈಯಾಯುಧವಾಗಬಾರದು’’ ಎಂದು ಪೀಠ ಪ್ರಶಾಂತ ಭೂಷಣ್‌ರನ್ನು ತರಾಟೆಗೆ ತೆಗೆದುಕೊಂಡಿತು.
ಧ್ವನಿಯಿಲ್ಲದ ಬಡವರ ಅಹವಾಲುಗಳನ್ನು ನ್ಯಾಯಾಂಗದ ಮೂಲಕ ಸರಕಾರವು ಆಲಿಸುವಂತೆ ಮಾಡಲು ಅಮೆರಿಕದ ಕ್ಲಾಸ್ ಆ್ಯಕ್ಷನ್ ಸೂಟ್‌ನಂತೆಯೇ ಭಾರತದಲ್ಲಿ ಬೇರು ಬಿಡುತ್ತಿರುವ ಸಿಪಿಐಎಲ್, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ವಿ.ಎಂ.ತಾರ್ಕುಂಡೆ 1980ರ ಅಂತ್ಯದಲ್ಲಿ ಸ್ಥಾಪಿಸಿದ ಸಂಸ್ಥೆಯಾಗಿದೆ. ಫಾಲಿ.ಎಸ್.ನರಿಮನ್, ಶಾಂತಿ ಭೂಷಣ್, ರಾಜೀಂದರ್ ಸಾಚಾರ್ ಹಾಗೂ ಅನಿಲ್ ದಿವಾನ್ ಅದರ ಸ್ಥಾಪಕ ಸದಸ್ಯರಾಗಿದ್ದರೂ ಎನ್‌ಜಿಒ ಈಗ ತನ್ನ ಕಚೇರಿಯಿಂದ ಕಾರ್ಯಾಚರಿಸುತ್ತಿದೆಯೆಂದು ಪ್ರಶಾಂತ್ ನ್ಯಾಯಪೀಠಕ್ಕೆ ತಿಳಿಸಿದರು.
ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ಗಳಿಗೆ ಪಿಐಎಲ್‌ಗಳನ್ನು ಸಲ್ಲಿಸುವ ಮೊದಲು. ದೂರುಗಳು ಅಧಾರ ಭೂತವೇ ಹಾಗೂ ಅವುಗಳಲ್ಲಿ ಮೊಕದ್ದಮೆ ದಾಖಲಿಸುವಂತಹ ಯೋಗ್ಯವಾದ ಸಾರ್ವಜನಿಕ ಉದ್ದೇಶವಿದೆಯೇ? ಎಂದು ಪರಿಶೀಲಿಸುವ ವ್ಯವಸ್ಥೆಯನ್ನು ಅದು ಹೊಂದಿದೆಯೆಂದು ಅವರು ಹೇಳಿದರು.
ಪರಿಶೀಲನಾ ವ್ಯವಸ್ಥೆಯ ವಿವರ ತಿಳಿಯಲು ನ್ಯಾಯಪೀಠ ಬಯಸಿತು. ಒಂದು ವೇಳೆ ಈ ಐವರು ಖ್ಯಾತ ವ್ಯಕ್ತಿಗಳು ಸಿಪಿಐಎಲ್ ದಾಖಲಿಸಿರುವ ಪಿಐಎಲ್‌ನ ವಿಷಯಗಳನ್ನು ಪರಿಶೀಲಿಸಿದ್ದೇವೆಂದು ಅಫಿದಾವಿತ್ ಸಲ್ಲಿಸಿದರೆ ನ್ಯಾಯಾಲಯಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಯೋಗ್ಯತೆಯನ್ನು ಪರಿಶೀಲಿಸಲು ಸಮಯ ವ್ಯರ್ಥ ಮಾಡುವುದಿಲ್ಲ. ತಾವು ಅದರ ಬಗ್ಗೆ ತೀರ್ಪು ನೀಡಲು ಬಯಸುವೆವು. ಸಿಪಿಐಎಲ್ ಸಾರ್ವಜನಿಕ ಹಿತಾಸಕ್ತಿಯ ದೂರು ಸಲ್ಲಿಸುವಾಗ ಯಾವ ಪ್ರಕ್ರಿಯೆಯನ್ನು ಅನುಸರಿಸಬೇಕು? ಸಿಪಿಐಎಲ್‌ನ್ನು ಪ್ರಾಯೋಜಿಸುತ್ತಿರುವ ಖ್ಯಾತ ವ್ಯಕ್ತಿಗಳು, ತಾವು ವಿಷಯದಲ್ಲಿ ತೃಪ್ತರಾಗಿದ್ದೇನೆಂದು ಅಫಿದಾವಿತ್ ಸಲ್ಲಿಸಲೇಬೇಕು. ಅಂತಹ ಅಫಿದಾವಿತ್‌ನೊಂದಿಗಿನ ಪಿಐಎಲ್‌ಗಳಿಗೆ ಮಾತ್ರ ತಾವು ಮಾನ್ಯತೆ ನೀಡುತ್ತೇವೆಂದು ಪೀಠ ಸ್ಪಷ್ಟಪಡಿಸಿತು.
ಲಾಭ ರಹಿತ, ರಾಜಕೀಯ ರಹಿತ ಸಂಘಟನೆಯು 50ಕ್ಕೂ ಹೆಚ್ಚು ಪಿಐಎಲ್‌ಗಳನ್ನು ದಾಖಲಿಸಿದೆ ಹಾಗೂ ಭ್ರಷ್ಟಾಚಾರ, ಲಿಂಗ ತಾರತಮ್ಯ ಹಾಗೂ ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಟದಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಿದೆ. ಎನ್‌ಜಿಒ ಸಲ್ಲಿಸಿರುವ ಕೆಲವು ದೂರುಗಳು ಏಕಪಕ್ಷೀಯ 2ಜಿ ಸ್ಪೆಕ್ಟ್ರಂ ಮಂಜೂರಾತಿಗೆ ಸಂಬಂಧಿಸಿದವುಗಳಾಗಿವೆ. ಮುಖ್ಯ ಜಾಗೃತ ಆಯುಕ್ತರಾಗಿ ಪಿ.ಜೆ.ಥೋಮಸ್‌ರ ನೇಮಕ, ಮಾಜಿ ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾರ ಟೆಲಿಫೋನ್ ಕದ್ದಾಲಿಸುವಿಕೆ ಆರೋಪದ ತನಿಖೆ, ಪ್ರತಿ ವರ್ಷ ಅಪಾರ ಹಣ ಖರ್ಚು ಮಾಡುವ ಗುಪ್ತಚರ ಸಂಸ್ಥೆಗಳ ಮೇಲೆ ಉತ್ತರದಾಯಿತ್ವವನ್ನು ಗಟ್ಟಿಗೊಳಿಸುವ, ದಲಿತ ಕ್ರೈಸ್ತರು ಹಾಗೂ ಮುಸ್ಲಿಮರಿಗೆ ಮೀಸಲಾತಿ ಹಾಗೂ ದಿಲ್ಲಿ ನ್ಯಾಯಾಂಗ ಸೇವಾ ಪರೀಕ್ಷೆಯ ಅವ್ಯವಹಾರಕ್ಕೆ ಸಂಬಂಧಿಸಿದವುಗಳು ಕೆಲವಿದೆಯೆಂದು ಪ್ರಶಾಂತ್ ನ್ಯಾಯಪೀಠಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News