×
Ad

ಜಲಾಲಾಬಾದ್ ಪಾಕ್ ದೂತಾವಾಸದ ಮೇಲೆ ದಾಳಿ: 5 ಉಗ್ರರು, 7 ಭದ್ರತಾ ಸಿಬ್ಬಂದಿ ಹತ

Update: 2016-01-13 23:49 IST

ಕಾಬೂಲ್, ಜ.13: ಅಫ್ಘಾನಿಸ್ತಾನದ ಜಲಾಲಾಬಾದ್‌ನಲ್ಲಿರುವ ಪಾಕಿಸ್ತಾನ ದೂತಾವಾಸದ ಬಳಿ ಬುಧವಾರ ಆತ್ಮಹತ್ಯಾ ಬಾಂಬರ್ ಒಬ್ಬ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆ.
ಬಳಿಕ ದೂತಾವಾಸದ ಬಳಿಯ ಮನೆಯೊಂದರಲ್ಲಿ ಅಡಗಿದ್ದ ಬಂದೂಕುಧಾರಿಗಳೊಂದಿಗೆ ಅಫ್ಘಾನಿಸ್ತಾನದ ಭದ್ರತಾ ಪಡೆಗಳು ಗುಂಡು ವಿನಿಮಯ ನಡೆಸಿವೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
 ಆತ್ಮಹತ್ಯಾ ಸ್ಫೋಟ ಮತ್ತು ಬಳಿಕ ನಡೆದ ಗುಂಡಿನ ಕಾಳಗದಲ್ಲಿ ಏಳು ಭದ್ರತಾ ಸಿಬ್ಬಂದಿ ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಹಾಗೂ 12 ಮಂದಿ ಗಾಯಗೊಂಡಿದ್ದಾರೆ. ಅದೇ ವೇಳೆ, ಐವರು ಭಯೋತ್ಪಾದಕರೂ ಹತರಾಗಿದ್ದಾರೆ.
ಪಾಕಿಸ್ತಾನ ಪ್ರವಾಸಕ್ಕೆ ವೀಸಾ ಪಡೆದುಕೊಳ್ಳುವುದಕ್ಕಾಗಿ ಪಾಕ್ ಕಾನ್ಸುಲೇಟ್ ಕಚೇರಿಯ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದ ಜನರೊಂದಿಗೆ ಸೇರಲು ಆತ್ಯಹತ್ಯಾ ಬಾಂಬರ್ ಪ್ರಯತ್ನಿಸಿದನು ಎನ್ನಲಾಗಿದೆ. ಭದ್ರತಾ ಸಿಬ್ಬಂದಿ ಆತನನ್ನು ಹೊರಗೆ ಅಟ್ಟಲು ಪ್ರಯತ್ನಿಸಿದಾಗ ಆತ ತನ್ನನ್ನು ತಾನೇ ಸ್ಫೋಟಿಸಿಕೊಂಡನು.
ಸರಣಿ ಸ್ಫೋಟಗಳು ಕೇಳಿಸಿದವು. ಹತ್ತಿರದ ಶಾಲೆಯೊಂದರ ಮಕ್ಕಳನ್ನು ಹಾಗೂ ನಿವಾಸಿಗಳನ್ನು ತೆರವುಗೊಳಿಸಲಾಯಿತೆಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
 ಈ ಸ್ಫೋಟಗಳು ಭಾರತೀಯ ಕಾನ್ಸುಲೇಟ್‌ಗೆ 200 ಮೀಟರ್ ದೂರದಲ್ಲಿ ಸಂಭವಿಸಿವೆ.
ಪಾಕಿಸ್ತಾನಿ ಹಾಗೂ ಭಾರತೀಯ ದೂತಾವಾಸಗಳಿರುವ ಅದೇ ಬೀದಿಯ ಮನೆಯೊಂದರಲ್ಲಿ ಕೆಲವು ದಾಳಿಕಾರರು ಅಡಗಿದ್ದಾರೆಂದು ಖಚಿತವಲ್ಲದ ವರದಿಗಳು ತಿಳಿಸಿವೆಯೆಂದು ‘ಪರ್ಟೊಕ್ ಅಫ್ಘಾನ್ ನ್ಯೂಸ್’ ವರದಿ ಮಾಡಿದೆ.
 ಎಲ್ಲ ಭಾರತೀಯರೂ ಸುರಕ್ಷಿತವಾಗಿದ್ದಾರೆನ್ನಲಾಗಿದೆ. ಇದು, ಕಳೆದ 10 ದಿನಗಳಲ್ಲಿ ಅಫ್ಘಾನಿಸ್ತಾನದ ಭಾರತೀಯ ದೂತಾವಾಸದ ಬಳಿ ನಡೆದ ಮೂರನೆಯ ದಾಳಿಯಾಗಿದೆ.
 ಇತ್ತೀಚೆಗೆ, ತಾಲಿಬಾನ್‌ನೊಂದಿಗೆ ಮಾತುಕತೆಯ ಹೊಸ ಪ್ರಯತ್ನ ಹಾಗೂ ಭಾರತ-ಪಾಕಿಸ್ತಾನಗಳ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯ ಶಮನ ಯತ್ನಗಳ ನಡುವೆಯೇ ಅಫ್ಘಾನಿಸ್ತಾನದಲ್ಲಿ ಸರಣಿ ಆತ್ಮಹತ್ಯಾ ದಾಳಿಗಳು ನಡೆದಿದ್ದವು. ಜ.8ರಂದು ಹೆರಾತ್‌ನ ಭಾರತೀಯ ಕಾನ್ಸುಲೇಟ್‌ನ ಬಳಿ ಸ್ಫೋಟಕ ತುಂಬಿದ್ದ ವಾಹನವೊಂದು ಪತ್ತೆಯಾಗಿತ್ತು. ಈ ಸಂಬಂಧ ಒಬ್ಬನನ್ನು ಬಂಧಿಸಲಾಗಿತ್ತು. ಅದು, ಅಫ್ಘಾನಿಸ್ತಾನದ ಇನ್ನೊಂದು ಭಾರತೀಯ ಕಾನ್ಸುಲೇಟ್‌ನ ಮೇಲೆ ದಾಳಿಯನ್ನು ನಡೆಸುವ ಉದ್ದೇಶವಾಗಿತ್ತೆಂಬ ಸಂಶಯಕ್ಕೆ ಕಾರಣವಾಗಿತ್ತು.
ಜ.3ರಂದು ಭಯೋತ್ಪಾದಕರು ಮಝರ್-ಎ-ಶರೀಫ್‌ನ ಭಾರತೀಯ ಕಾನ್ಸುಲೇಟ್ ಕಟ್ಟಡದೊಳಗೆ ನುಗ್ಗಲು ಯತ್ನಿಸಿದ್ದರು. ಭಾರತೀಯ ಕಾನ್ಸುಲೇಟ್‌ನ ಮುಂದಿನ ಕಟ್ಟಡದಲ್ಲಿ ಅಡಗಿದ್ದ ದಾಳಿಕಾರರನ್ನು ಕೊಲ್ಲುವುದರೊಂದಿಗೆ ಜ.4ರಂದು ಬಿಕ್ಕಟ್ಟು ಪರಿಹಾರವಾಗಿತ್ತು. ಘಟನೆಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಮೃತನಾಗಿ, ಮೂವರು ನಾಗರಿಕರ ಸಹಿತ 9 ಮಂದಿ ಗಾಯಗೊಂಡಿದ್ದರು.
ಮಝರ್-ಎ-ಶರೀಫ್‌ನ ಭಾರತೀಯ ಕಾನ್ಸುಲೇಟ್ ದಾಳಿಯಲ್ಲಿ ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳು ಭಾಗವಹಿಸಿದ್ದರೆಂದು ಅಫ್ಘಾನ್ ಪೊಲೀಸ್‌ನ ಹಿರಿಯಧಿಕಾರಿಯೊಬ್ಬರು ಮಂಗಳವಾರ ಆರೋಪಿಸಿದ್ದರು.
ತಾವು ನನ್ನ ಸ್ವಂತ ಕಣ್ಣುಗಳಿಂದ ನೋಡಿದ್ದೇವೆ. ಆ ದಾಳಿಕಾರರು ಪಾಕಿಸ್ತಾನದ ಸೇನೆಯವರು ಹಾಗೂ ಕಾರ್ಯಾಚರಣೆಯ ವೇಳೆ ವಿಶೇಷ ತಂತ್ರ ಉಪಯೋಗಿಸಿದ್ದರೆಂದು ತಾನು ಶೇ.99ರಷ್ಟು ಖಚಿತವಾಗಿ ಹೇಳಬಲ್ಲೆನೆಂದು ಬಲ್ಖ್ ಪ್ರಾಂತದ ಪೊಲೀಸ್ ವರಿಷ್ಠ ಸೈಯದ್ ಕಮಾಲ್ ಸಾದಾತ್ ತಿಳಿಸಿದ್ದರು.
ದಾಳಿಕಾರರು ಮಿಲಿಟರಿ ಯೋಧರಾಗಿದ್ದರು. ಅವರು ವಿದ್ಯಾವಂತರು, ಸೂಕ್ತ ಸಿದ್ಧತೆಯಲ್ಲಿದ್ದವರು ಹಾಗೂ ಬುದ್ದಿವಂತರಾಗಿದ್ದರು. ಅವರು ತಮ್ಮಿಂದಿಗೆ 25 ತಾಸು ಕಾದಾಡಿದರು. ದೇವರ ದಯೆಯಿಂದ ಕೊನೆಗೂ ಅವರನ್ನು ಕೊಲ್ಲಲು ತಮಗೆ ಸಾಧ್ಯವಾಯಿತೆಂದು ಸಾದಾತ್ ಹೇಳಿದರೆಂದು ಟೋಲೋ ನ್ಯೂಸ್ ವರದಿ ಮಾಡಿದೆ.

ಹೊಣೆ ಹೊತ್ತುಕೊಂಡ ಐಸಿಸ್
ಜಲಾಲಾಬಾದ್‌ನ ಪಾಕಿಸ್ತಾನ ದೂತಾವಾಸ ಕಚೇರಿಯನ್ನು ಗುರಿಯಾಗಿಸಿ ನಡೆದ ಭೀಕರ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದೆ.
ಮೂವರು ಐಸಿಸ್ ಹೋರಾಟಗಾರರು ದಾಳಿ ನಡೆಸಿದರು ಹಾಗೂ ಅವರ ಪೈಕಿ ಇಬ್ಬರು ತಮ್ಮನ್ನು ತಾವು ಸ್ಫೋಟಿಸಿಕೊಂಡರು ಎಂದು ಟ್ವಿಟರ್‌ನಲ್ಲಿ ಅರೇಬಿಕ್ ಭಾಷೆಯಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ಐಸಿಸ್ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News