ಆತೂರು ದ್ಸಿಕ್ರ್ ಹಲ್ಕಾ ವಾರ್ಷಿಕೋತ್ಸವ
ದ್ಸಿಕ್ರ್, ಸ್ವಲಾತ್ ಮೂಲಕ ಆತ್ಮ ಶುದ್ಧೀಕರಣ-ತ್ವಾಖ ಅಹಮದ್ ಮುಸ್ಲಿಯಾರ್
ಕಡಬ: ನಮಾಝ್ ನಿರ್ವಹಣೆ, ಕುರಾನ್ ಪಠಣದೊಂದಿಗೆ, ದ್ಸಿಕ್ರ್, ಸ್ವಲಾತ್ ನಿರ್ವಹಣೆಗೂ ಮಹತ್ತರವಾದ ಸ್ಥಾನ ಇದ್ದು, ಆ ಮೂಲಕ ಆತ್ಮ ಶುದ್ಧೀಕರಣ ಸಾಧ್ಯ ಎಂದು ದ.ಕ. ಜಿಲ್ಲಾ ಖಾಝಿ ತ್ವಾಖ ಅಹಮದ್ ಮುಸ್ಲಿಯಾರ್ ಹೇಳಿದರು.
ಅವರು ಇತ್ತೀಚೆಗೆ ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಪ್ರತಿ ತಿಂಗಳ ಮೊದಲ ಗುರುವಾರ ರಾತ್ರಿ ಆಚರಿಸಿಕೊಂಡು ಬರುತ್ತಿರುವ ದ್ಸಿಕ್ರ್ ಹಲ್ಕಾ ಇದರ 15ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ದುವಾಃ ನೆರವೇರಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಲ್ಲಿನ ದ್ಸಿಕ್ರ್ ಹಲ್ಕಾದ ಪಾವಿತ್ರತೆ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿದ್ದು, ಇಲ್ಲಿನ ವಿಶೇಷತೆಗೆ ಸಾಕ್ಷಿಯಾಗಿದೆ ಎಂದರು. ದ್ಸಿಕ್ರ್ ಹಲ್ಕಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಮಾತನಾಡಿ ಪ್ರತೀ ತಿಂಗಳ ದ್ಸಿಕ್ರ್ ಕಾರ್ಯಕ್ರಮಗಳಿಗೆ ಆಗಮಿಸಿ ತನ್ನ ಸಮಸ್ಯೆ, ಅಸಹಾಯಕತೆಗಳನ್ನು ತೋಡಿಕೊಂಡು ಅದರಿಂದ ಮುಕ್ತಿ ಹೊಂದಿರುವ ನೂರಾರು ಉದಾಹರಣೆಗಳು ನಮ್ಮ ಮುಂದೆ ಇದ್ದು ಈ ದಿಸೆಯಲ್ಲಿ ಇಂದು ಆತೂರು ಪಾವಿತ್ರತೆಯ ಕೇಂದ್ರವಾಗಿ ಹೊರ ಹೊಮ್ಮಿದೆ ಎಂದರು.
ಅಡ್ಯಾರು-ಕಣ್ಣೂರು ಜುಮಾ ಮಸೀದಿಯ ಖತೀಬ್ ಝೈನುಲ್ ಅಬಿದೀನ್ ಜಿಫ್ರಿ ತಂಙಳ್ ಮಾತನಾಡಿ ದ್ಸಿಕ್ಸ್‌ಗೆ ಇರುವ ಪಾವಿತ್ರತೆ ಬಗ್ಗೆ ತಿಳಿಸಿದರು. ಕಾಸರಗೋಡು ಇಮಾಮ್ ಶಾಫಿ ಇಸ್ಲಾಮಿಕ್ ಅಕಾಡೆಮಿ ಮುದರ್ರಿಸ್ ಅಶ್ರಫ್ ರಹ್ಮಾನಿ ಚೌಕಿ ಧಾರ್ಮಿಕ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಹಾಜಿ ಡಾ ಕೆ.ಎಂ. ಶಾಹ್ ಮುಸ್ಲಿಯಾರ್, ಆತೂರು ಮೊಹಿಯುದ್ದೀನ್ ಜುಮಾ ಮಸೀದಿ ಖತೀಬ್ ಹನೀಫ್ ಫೈಝಿ, ಅಧ್ಯಕ್ಷ ಅಯ್ಯೂಬ್ ಹಾಜಿ, ಪೆರಿಯಡ್ಕ ಮಸೀದಿ ಖತೀಬ್ ಝೈನುದ್ದೀನ್ ಯಮನಿ, ಅಧ್ಯಕ್ಷ ಯು.ಕೆ. ಹಮೀದ್, ಗಂಡಿಬಾಗಿಲು ಮಸೀದಿ ಅಧ್ಯಕ್ಷ ಪಿ. ಯಕೂಬ್, ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಆತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹೆಚ್. ಆದಂ ಮೊದಲಾದವರು ಉಪಸ್ಥಿತರಿದ್ದರು.