ಜ.15: ವಿಶ್ವದ ಪ್ರಪ್ರಥಮ ಪರಿಸರ ಸ್ನೇಹಿ 'ಹಸಿರು ಮಸೀದಿ' ಕೋಡಿಯಲ್ಲಿ ಉದ್ಘಾಟನೆ
ಉಡುಪಿ ಜಿಲ್ಲೆ ಕುಂದಾಪುರದ ಕೋಡಿಯಲ್ಲಿನ ‘ಬದ್ರಿಯಾ ಜುಮಾ ಮಸೀದಿ’ ವಿಶ್ವದ ಪ್ರಥಮ ‘ಶೂನ್ಯ ವಿದ್ಯುತ್ (zero energy)’ ನ ಪರಿಸರ ಸ್ನೇಹಿ ಹಸಿರು ಮಸೀದಿಯಾಗಿದೆ. ಸುಸ್ಥಿರ ಅಭಿವೃದ್ಧಿ ಬಗ್ಗೆ ಮುತುವರ್ಜಿ ವಹಿಸುತ್ತಿರುವ ಬ್ಯಾರೀಸ್ ಗ್ರೂಪ್ ಈ ವಿನೂತನ ಮಸೀದಿ ನಿರ್ಮಾಣದ ಕಲ್ಪನೆಯನ್ನು ಸಾಕಾರಗೊಳಿಸಿದೆ. ಸುಸ್ಥಿರ ತಂತ್ರಜ್ಞಾನಗಳ ಮೂಲಕ ನಿರ್ಮಾಣವಾಗಿರುವ ಮಸೀದಿಯ ವಿನ್ಯಾಸವು ಇಸ್ಲಾಮಿಕ್ ವಾಸ್ತುಶಿಲ್ಪದಲ್ಲೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ ಎಂದು ಬ್ಯಾರಿಸ್ ಗ್ರೂಪ್ ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸೌರ ಶಕ್ತಿಯನ್ನು ಉಪಯೋಗಿಸಿಕೊಂಡು ಕಟ್ಟಡಕ್ಕೆ ಅಗತ್ಯವಿರುವ ವಿದ್ಯುತ್ತನ್ನು ಪೂರೈಸುತ್ತಿರುವುದು ಈ ಹಸಿರು ವಿಸ್ಮಯದ ಪ್ರಮುಖ ವಿಶೇಷತೆ. ಇಡೀ ವಿಶ್ವವೇ ಹವಾಮಾನ ವೈಪರೀತ್ಯಗಳಿಂದ ತತ್ತರಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಈ ‘ಹಸಿರು ಮಸೀದಿ’ಯು ಸುಸ್ಥಿರ ಅಭಿವೃದ್ದಿಗಳ ಮೂಲಕ ಜಾಗತಿಕ ತಾಪಮಾನವನ್ನು ಯಾವ ರೀತಿಯಲ್ಲಿ ಕಡಿಮೆ ಮಾಡಬಹುದು ಎಂದು ತೋರಿಸಿಕೋಡಲಿದೆ ಎಂದರು.
ಪ್ರಪ್ರಥಮ ಪರಿಸರ ಸ್ನೇಹಿ ಹಸಿರು ಮಸೀದಿ’ ಬದ್ರಿಯ ಜುಮಾ ಮಸ್ಜಿದ್' ಜ.15ರಂದು ಬೆಳಗ್ಗೆ 11ಗಂಟೆಗೆ ಉದ್ಘಾಟನೆ ನಡೆಯಲಿದೆ. ಸಂಜೆ 4 ರಿಂದ 6 ಗಂಟೆಯ ವರೆಗೆ ದೇಶದ ವಿವಿಧೆಡೆಗಳ ತಜ್ಞರಿಂದ ಕುರ್ಆನ್ ವಾಚನ ಸಮಾವೇಶ ನಡೆಯಲಿದೆ.
ಈ ಸಂದರ್ಭ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ ಬಿ) ಇದರ ಅಧ್ಯಕ್ಷರು ಹಾಗೂ ದಾರುಲ್ ಉಲೂಮ್ ನದ್ವತುಲ್ ಉಲಮಾ, ಲಕ್ನೊ ಇದರ ಮುಖ್ಯಸ್ಥ ಹಝ್ರತ್ ಮೌಲಾನ ಸಯ್ಯದ್ ಮುಹಮ್ಮದ್ ರಾಬೇ ಹಸನಿ ನದ್ವಿ, ದಾರುಲ್ ಉಲೂಮ್ ಸಬೀಲುರ್ ರಶಾದ್, ಬೆಂಗಳೂರು ಇದರ ಪ್ರಾಂಶುಪಾಲ ಮುಫ್ತಿ ಅಶ್ರಫ್ ಅಲಿ ಬಾಖವಿ, ಉಡುಪಿ ಜಿಲ್ಲಾ ಖಾಝಿ ಬೇಕಲ ಇಬ್ರಾಹಿಮ್ ಮುಸ್ಲಿಯಾರ್ ಉಪಸ್ಥಿತರಿರುವರು.
ಪತ್ರಿಕಾಗೋಷ್ಟಿಯಲ್ಲಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮೆಹ್ಮೂದ್ ಮಾಸ್ಟರ್ ಉಪಸ್ಥಿತರಿದ್ದರು.