×
Ad

ಸುಳ್ಯ ಸ್ನೇಹ ಶಾಲೆಯಲ್ಲಿ ಬಯಲು ಸೂರ್ಯ ಆಲಯದ ಸ್ಥಾಪನೆ

Update: 2016-01-14 18:20 IST

ಸುಳ್ಯ: ಸುಳ್ಯದ ಸ್ನೇಹ ಶಿಕ್ಷಣಸಂಸ್ಥೆಯ ವಠಾರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಯಲು ಸೂರ್ಯ ಆಲಯದ ಅನಾವರಣ ಮತ್ತು ಯೋಗಕೇಂದ್ರದ ಉದ್ಘಾಟನೆ ನಡೆಯಿತು.

ಗಣಹೋಮ, ಸರಸ್ವತಿ ಹೋಮ, ನವಗ್ರಹ ಹವನ ಮತ್ತು ಸೂರ್ಯ ನಮಸ್ಕಾರ ಸಹಿತ ಸೌರ ಹವನಗಳ ಮೂಲಕ ಬಯಲು ಸೂರ್ಯ ಆಲಯ ಅನಾವರಣಗೊಂಡಿತು. ದರ್ಬೆತ್ತಡ್ಕ ಶಂಕರ ವೇದವಿದ್ಯಾ ಗುರುಕುಲದ ಪ್ರಾಚಾರ್ಯ ಘನಪಾಟಿ ಅಂಶುಮಾನ್ ಅಭ್ಯಂಕರ್ ನೇತೃತ್ವ ವಹಿಸಿದ್ದರು. ಯೋಗಕೇಂದ್ರ ಉದ್ಘಾಟನೆಯನ್ನು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ನೆರವೇರಿಸಿ ಯೋಗ ಪ್ರಾತ್ಯಕ್ಷಿಕೆ ನೀಡಿದರು. ಇದೇ ಸಂದರ್ಭ ಕಾರ್ಮಿಕರ ಮತ್ತು ಶಿಲ್ಪಿಗಳ ಸನ್ಮಾನ ಕಾರ್ಯಕ್ರಮ ನಡೆಯಿತು. ಶಿಲ್ಪಿ ಪಾಂಡುರಂಗ ಪಾಠಕ್, ಕಾರ್ಮಿಕರಾದ ಸುಬ್ರಹ್ಮಣ್ಯ, ನಾರಾಯಣ ಶಿಬಾಜೆ, ವಾಸು, ಕುಶಾಲಪ್ಪರವರನ್ನು ಗೌರವಿಸಲಾಯಿತು. ಗೋಪಾಲಕೃಷ್ಣ ದೇಲಂಪಾಡಿಯವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾಸಕ ಎಸ್.ಅಂಗಾರ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಭಕ್ತಿಯ ಶಕ್ತಿ ಅನಾವರಣಗೊಂಡಿದೆ.

ಮನಸ್ಸು ಮತ್ತು ಆತ್ಮಕ್ಕೆ ಸರಿಕಾಣದ ಕಾರ್ಯಗಳನ್ನೇ ಇಂದು ಮಾಡುತ್ತಿರುವುದರಿಂದ ಬದುಕಿನಲ್ಲಿ ನೆಮ್ಮದಿ ಇಲ್ಲದಾಗಿದೆ. ಯೋಗ ಸಾಧನೆಯ ಮೂಲಕ ನೆಮ್ಮದಿ ಮೂಡುತ್ತದೆ. ಹಾಗಾಗಿ ಜಗತ್ತಿನಲ್ಲಿಯೇ ಯೋಗಕ್ಕೆ ಶಕ್ತಿ ಇದೆ ಎಂದರು.
ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಮಾತನಾಡಿ, ಗುರುಕುಲದಂತಿರುವ ಸ್ನೇಹ ಶಾಲೆ ಪಟ್ಟಣದಲ್ಲಿರುವ ಹಳ್ಳಿ ಶಾಲೆ. ತನ್ನ ಸಾಧನೆಗಳಿಂದ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಜೀವನಕ್ಕೆ ಶಕ್ತಿ ನೀಡುವ ಸೂರ್ಯನ ಬಗೆಗಿನ ತಿಳುವಳಿಕೆ ಕೊಡುವ ಆಲಯದ ಸ್ಥಾಪನೆ ಅಭಿನಂದನೀಯ ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ, ವಿಂಶತಿ ಉತ್ಸವದ ಸವಿನೆನಪಿಗಾಗಿ ‘ಬಯಲು ಸೂರ್ಯ ಆಲಯ’ ಎಂಬ ಧ್ಯಾನ ಮತ್ತು ಯೋಗ ಕೇಂದ್ರವನ್ನು ಸ್ಥಾಪಿಸುತ್ತಿದ್ದೇವೆ. ಸೂರ್ಯನನ್ನು ಜಗತ್ ಚಕ್ಷು ಎಂದು ಕರೆದಿದ್ದಾರೆ. ಸೂರ್ಯನೂ ಪ್ರಕೃತಿಯ ಒಂದು ಅಂಗವಾಗಿದ್ದು ಎಲ್ಲ ಜೀವಿಗಳ ಚೈತನ್ಯ ಶಕ್ತಿಯಾಗಿದ್ದು ಜಗತ್ತಿನಲ್ಲಿ ಎಲ್ಲ ಸಮುದಾಯಗಳೂ ಆತನನ್ನು ದೇವರೆಂದು ಆರಾಧಿಸುತ್ತಾರೆ. ಹಾಗಾಗಿ ಜಾತಿ-ಮತಗಳ ಎಲ್ಲೆಗಳನ್ನು ಮೀರಿದ ಸೂರ್ಯನ ಆರಾಧನಾ ಕೇಂದ್ರವನ್ನು "ಶಿಕ್ಷಣಕ್ಕೆ ಆಧ್ಯಾತ್ಮಿಕ ಸ್ಪರ್ಶ" ನೀಡುವ ಉದ್ದೇಶದಿಂದ ಸ್ಥಾಪಿಸಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ಜ್ಯೋತಿಷಿ ಪ್ರಕಾಶ ಅಮ್ಮಣ್ಣಾಯ ಸಂಸ್ಥೆಗೆ ಬೈನಾಕ್ಯುಲರ್ ಕೊಡುಗೆಯಾಗಿ ನೀಡಿದರು.
ನ.ಪಂ. ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ.ದಿವಾಕರ ರೈ, ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪಾಲೆಪ್ಪಾಡಿ ಗಣಪಯ್ಯ ಭಟ್, ಚೊಕ್ಕಾಡಿ ಶ್ರೀರಾಮ ದೇವಾಲಯದ ಗೌರವ ಸಲಹೆಗಾರ ಆನೆಕಾರ ಗಣಪಯ್ಯ ಭಟ್, ಕಾಯರ್ತೋಡಿ ಮಹಾವಿಷ್ಣು ದೇವಾಳಯದ ಉತ್ಸವ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ರೋಟರಿ ಅಧ್ಯಕ್ಷ ಬೆಳಿಯಪ್ಪ ಗೌಡ, ಲಯನ್ಸ್ ಅಧ್ಯಕ್ಷ ಜಯರಾಮ ದೇರಪ್ಪಜ್ಜನಮನೆ, ಉಪೇಂದ್ರ ಕಾಮತ್, ಶ್ರೀನಿವಾಸ್ ರಾವ್ ಪೈಲೂರು, ಭೀಮರಾವ್ ವಾಷ್ಠರ್, ಜಗನ್ಮೋಹನ ರೈ ಮರ್ಕಂಜ, ಕೆ.ಆರ್.ಗಂಗಾಧರ, ಭಕ್ತವತ್ಸಲ ನೀರಬಿದಿರೆ, ಲತಾಮಧುಸೂದನ್, ಪ್ರೊ.ಶ್ರೀಕೃಷ್ಣ ಭಟ್, ಪಿ.ಕೆ.ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.
ಸಮೀರ ದಾಮ್ಲೆ ಕಾರ್ಯಕ್ರಮ ನಿರೂಪಿಸಿದರು. ಡಾ.ವಿದ್ಯಾಶಾಂಭವ ಪಾರೆ ವಂದಿಸಿದರು. ಸಂಸ್ಥೆಯ ನಿರ್ದೇಶಕ ಶ್ರೀಕರ ದಾಮ್ಲೆ, ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಸಹಕರಿಸಿದರು.

 ವೇದ-ಯೋಗ ಎಂಬುದು ಸಾತ್ವಿಕ ವಿಜ್ಞಾನ. ಇದರಿಂದ ಜನತೆಗೆ ಪ್ರಯೋಜನ ಹೊರತು ವಿಪತ್ತಿಲ್ಲ. ಆದರೆ ಆಧುನಿಕ ವಿಜ್ಞಾನದಿಂದ ವಿಶ್ವದೆಲ್ಲೆಡೆ ಕಸಗಳ ರಾಶಿಯೇ ತುಂಬಿ ಹೋಗಿದೆ ಎಂದು ದರ್ಭೆತಡ್ಕದ ಶಂಕರ ವೇದ ವಿಜ್ಞಾನ ಗುರುಕುಲದ ಪ್ರಾಚಾರ್ಯ ಘನಪಾಠಿ ಅಂಶುಮಾನ್ ಅಭ್ಯಂಕರ್ ಹೇಳಿದ್ದಾರೆ. ಸುಳ್ಯದ ಸ್ನೇಹ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಬಯಲು ಸೂರ್ಯ ಆಲಯದ ಸ್ಥಾಪನೆಯ ಅಂಗವಾಗಿ ನಡೆದ ಜ್ಞಾನ ಕಲಶ ಕಾರ್ಯಕ್ರಮದಲ್ಲಿ ವೈದಿಕ ಕಾರ್ಯ ನಡೆಸಿ ಬಳಿಕ ಅವರು ಆಶೀರ್ವಚನ ನೀಡಿದರು. ಸೂರ್ಯನಿಗೆ ಉದಯ ಅಸ್ತ ಎಂಬುದು ಇಲ್ಲ. ಸೂರ್ಯ ಭೂಮಿ ಸುತ್ತುವುದೂ ಇಲ್ಲ. ಬದಲಾಗಿ ಭೂಮಿಯೇ ಸೂರ್ಯನಿಗೆ ಸುತ್ತುತ್ತಿದೆ. ಜ್ಯೋತಿಷ್ಯ ವಿಜ್ಞಾನಕ್ಕೂ ಖಗೋಳ ವಿಜ್ಞಾನಕ್ಕೂ ಸಾಕಷ್ಟು ಸಾಮ್ಯತೆಗಳಿವೆ. ಸೂರ್ಯ ನಿತ್ಯದ ಅತಿಥಿ. ಪ್ರತಿ ದಿನ ಆತನ ಆರಾಧನೆ ಮಾಡಬೇಕು. ಸೂರ್ಯನಂತೆ ಆತ್ಮಕ್ಕೂ ಉದಯ ಅಸ್ತಗಳಿಲ್ಲ. ಕತ್ತಲೆಯ ಸಂದರ್ಭದಲ್ಲೂ ನಮ್ಮ ಮೆದುಳಿನಲ್ಲಿ ಬೆಳಕಿರುತ್ತದೆ. ಆ ಬೆಳಕೇ ಸೂರ್ಯ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News