ಹಜ್ ಆಕಾಂಕ್ಷಿಗಳ ಫಾರ್ಮ್ ಹಸ್ತಾಂತರಕ್ಕೆ ಚಾಲನೆ
ಮಂಗಳೂರು, ಜ.14: ಹಜ್ ಯಾತ್ರೆ ಕೈಗೊಳ್ಳಲಿಚ್ಛಿಸುವ ಆಕಾಂಕ್ಷಿಗಳಿಗೆ ಫಾರ್ಮ್ ಹಸ್ತಾಂತರಿಸುವ ಪ್ರಕ್ರಿಯೆಗೆ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ವಕ್ಫ್ ಕಚೇರಿ ಮುಂಭಾಗದಲ್ಲಿ ಚಾಲನೆ ನೀಡಲಾಯಿತು.
ಹಜ್ ಯಾತ್ರೆ ಫಾರ್ಮ್ ಹಸ್ತಾಂತರಕ್ಕೆ ಚಾಲನೆ ನೀಡಿ ಮಾತನಾಡಿದ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಗೂ ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಎಸ್.ಎಂ.ರಶೀದ್ ಹಾಜಿ, ರಾಜ್ಯದಲ್ಲಿ ಹಜ್ ಯಾತ್ರಿಕರ ಫಾರ್ಮ್ ವಿತರಿಸುವ ಪ್ರಕ್ರಿಯೆಗೆ ಬುಧವಾರ ಸಚಿವ ರೋಶನ್ ಬೇಗ್ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದು, ಇಂದು ಮಂಗಳೂರಿನಲ್ಲಿ ಚಾಲನೆ ನೀಡಲಾಗಿದೆ ಎಂದರು. ಪ್ರಸಕ್ತ ವರ್ಷದಲ್ಲಿ ಹಜ್ ಯಾತ್ರೆ ಮಾಡಲಿಚ್ಛಿಸುವ ಯಾತ್ರಿಕರು ಫಾರ್ಮ್‌ಗಳನ್ನು ಪಡೆದು ಭರ್ತಿ ಮಾಡಿ ಮುಂದಿನ ಫೆಬ್ರವರಿ 8ರೊಳಗೆ ಬೆಂಗಳೂರಿನ ಹಜ್ ಕಮಿಟಿಗೆ ತಲುಪಿಸುವಂತೆ ಸೂಚಿಸಿದರು.
ರಾಜ್ಯ ವಕ್ಷ್ ಮಂಡಳಿಯ ಸದಸ್ಯ ಹಾಗೂ ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ ಮಾತನಾಡಿ, ಕಳೆದ ಆರು ವರ್ಷಗಳಿಂದ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವವರಿಗೆ ಉತ್ತಮ ಸೇವೆ ಒದಗಿಸಿದ್ದು, ಈ ಬಾರಿಯೂ ಪವಿತ್ರ ಯಾತ್ರೆ ಕೈಗೊಳ್ಳುವ ಮಂಗಳೂರು, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಸಹಿತ ಆರು ಜಿಲ್ಲೆಗಳ ಯಾತ್ರಿಕರಿಗೆ ಇನ್ನೂ ಹೆಚ್ಚಿನ ಸೇವೆಯನ್ನು ಮುಂದುರಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಮುಹಮ್ಮದ್ ಶರೀಫ್, ಮುಹಮ್ಮದ್ ಫಾರೂಕ್, ಅಬೂಬಕರ್ ಸಜಿಪ, ಜಿಲ್ಲಾ ವಕ್ಷ್ ಅಧಿಕಾರಿ ಅಬೂಬಕರ್, ಸಿ.ಮಹ್ಮೂದ್ ಹಾಜಿ, ವಕ್ಫ್ ಮಂಡಳಿಯ ದ.ಕ. ಜಿಲ್ಲಾ ಸದಸ್ಯರಾದ ಅಬ್ದುರ್ರಹ್ಮಾನ್ ಮೊಗರ್ಪಣೆ, ಹನೀಫ್ ಹಾಜಿ ಉಳ್ಳಾಲ, ಖಾದರ್ ವಿಟ್ಲ, ಹಸನ್ ಹಾಜಿ ಪುತ್ತೂರು, ಯು.ಕೆ.ಹನೀಫ್ ಉಜಿರೆ, ಮೊದಿನ್ ಮುಕ್ಕ, ಸಲೀಲ್ ಬಜ್ಪೆ, ಹನೀಫ್ ಬಜ್ಪೆ, ಹನೀಫ್ ಗೊಳ್ತಮಜಲು ಉಪಸ್ಥಿತರಿದ್ದರು.
ವಿಶೇಷ ಘಟಕ ಸ್ಥಾಪನೆ: ಎಸ್.ಎಂ.ರಶೀದ್
ಪವಿತ್ರ ಹಜ್ ಯಾತ್ರೆಗೆ ಸಂಬಂಧಪಟ್ಟಂತೆ ಮಾಹಿತಿ ನೀಡುವ ಸಲುವಾಗಿ ಈ ಬಾರಿ ಜಿಲ್ಲಾ ವಕ್ಫ್ ಕಚೇರಿಯಲ್ಲಿ ವಿಶೇಷ ಘಟಕ (ಡೆಸ್ಕ್)ವೊಂದನ್ನು ಸ್ಥಾಪಿಸುವುದಾಗಿ ಎಸ್.ಎಂ.ರಶೀದ್ ಭರವಸೆ ನೀಡಿದರು. ಹಜ್ ಯಾತ್ರೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯ ಅಗತ್ಯ ಬಿದ್ದಲ್ಲಿ ವಕ್ಫ್ ಕಚೇರಿಯಲ್ಲಿನ ಈ ವಿಶೇಷ ಘಟಕವನ್ನು ಸಂಪರ್ಕಿಸಬಹುದು ಎಂದ ಅವರು, ಮುಂದಿನ ಸೋಮವಾರದಿಂದ ಈ ಘಟಕ ಕಾರ್ಯಾಚರಿಸಲಿದೆ ಎಂದರು.
ಈ ಬಾರಿ ಬ್ಯಾಗ್ ವಿತರಣೆ ಇಲ್ಲ
2016ರಲ್ಲಿ ಹಜ್ ಯಾತ್ರೆ ಕೈಗೊಳ್ಳುವ ಆಕಾಂಕ್ಷಿಗಳಿಗೆ ಕಳೆದ ಬಾರಿಯಂತೆ ಈ ಬಾರಿ ಕೇಂದ್ರ ಹಜ್ ಸಮಿತಿಯಿಂದ ಬ್ಯಾಗ್ ವಿತರಣೆ ಮಾಡಲಾಗುವುದಿಲ್ಲ ಎಂದು ಎಸ್.ಎಂ.ರಶೀದ್ ಸ್ಪಷ್ಟಪಡಿಸಿದರು.