ಬಾಲ್ಯ ವಿವಾಹ ಪ್ರಕರಣ: ಅಪರಾಧಿಗಳಿಗೆ ಜೈಲುಶಿಕ್ಷೆ
ಉಡುಪಿ, ಜ.14: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ವಿವಾಹವಾಗಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಉಲ್ಲಂಘಿಸಿದ ಆರೋಪಿಗಳಿಗೆ ಉಡುಪಿ ಜಿಲ್ಲಾ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಆರೂರು ಗ್ರಾಮದ ಕುಂಜಾಲುವಿನ ಸುದರ್ಶನ ಕಿರಣ್(28) ಹಾಗೂ ಬ್ರಹ್ಮಾವರದ ಗುರುರಾಜ ಹಾಂಡಾ(26) ಎಂಬವರು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳು. ಸುದರ್ಶನ ಕಿರಣ್ 2010ರ ಆ.2ರಂದು ಅಪ್ರಾಪ್ತ ಬಾಲಕಿಯೊಬ್ಬಳನ್ನು ಬೆದರಿಸಿ ಅಪಹರಿಸಿದ್ದು, ಆಕೆ ಅಪ್ರಾಪ್ತ ವಯಸ್ಕಳು ಎಂಬುದು ತಿಳಿದಿದ್ದರೂ ವಯಸ್ಕಳೆಂಬಂತೆ ವೈದ್ಯಾಧಿಕಾರಿಯಿಂದ ಸುಳ್ಳು ದಾಖಲೆ ಪಡೆದು ಉಡುಪಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಸಿದ್ದನು. ನಂತರ ಆಕೆಯನ್ನು ಬೇರೆ ಬೇರೆ ಕಡೆಗೆ ಒಯ್ದು ಲೈಂಗಿಕ ಕಿರುಕುಳವೆಸಗಿದ್ದನೆಂದು ದೂರಲಾಗಿತ್ತು.
ಅಲ್ಲದೆ ಗುರುರಾಜ ಹಾಂಡಾ ಈ ಸುಳ್ಳು ಪ್ರಮಾಣಪತ್ರ ಪಡೆಯುವಲ್ಲಿ ಸಹಕಾರಿಯಾಗಿ ಕಾನೂನು ಸಮ್ಮತವಲ್ಲದ ಮದುವೆ ನೋಂದಣಿಯಾಗುವಂತೆ ಮಾಡಿ ನೋಂದಣಿ ದಾಖಲೆಗಳಿಗೆ ಸುಳ್ಳು ಸಹಿ ಮಾಡಿದ್ದನು. ಇವರ ವಿರುದ್ಧ ಅಂದಿನ ಬ್ರಹ್ಮಾವರ ವೃತ್ತ ನಿರೀಕ್ಷಕ ಜಿ.ಕೃಷ್ಣಮೂರ್ತಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ವೇಳೆ ಅಭಿಯೋಜನೆ ಪರವಾಗಿ ಮಹತ್ವದ ಸಾಕ್ಷಿಗಳನ್ನು ವಿಚಾರಣೆ ಗೊಳಪಡಿಸಲಾಗಿತ್ತು. ಈ ಕುರಿತು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಶಂಕರ್ ಅಮರಣ್ಣನವರ್ ಆರೋಪಿಗಳ ಮೇಲಿನ ಆರೋಪಗಳು ದೃಢಪಟ್ಟಿರುವುದಾಗಿ ಅಭಿಪ್ರಾಯಪಟ್ಟು ಭಾರತೀಯ ದಂಡ ಸಂಹಿತೆ ಕಲಂ 465ರ ಅಪರಾಧಕ್ಕೆ ಇಬ್ಬರಿಗೂ 1 ವರ್ಷದ ಶಿಕ್ಷೆ ಮತ್ತು ತಲಾ 1000ರೂ. ದಂಡ, ಕಲಂ 471ರ ಅಪರಾಧಕ್ಕೆ 1 ವರ್ಷ ಶಿಕ್ಷೆ ಹಾಗ ೂ ತಲಾ 1000ರೂ. ದಂಡ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಉಲ್ಲಂಘನೆ ಮಾಡಿದ್ದಕ್ಕೆ ಸುದರ್ಶನ್‌ಗೆ 1 ವರ್ಷ ಶಿಕ್ಷೆ ಹಾಗೂ 1000ರೂ. ದಂಡ ವಿಧಿಸಿ ಜ.14ರಂದು ತೀರ್ಪು ನೀಡಿದ್ದಾರೆ. ದಂಡದ ಮೊತ್ತ 5000ರೂ.ಯನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ಆದೇಶಿಸಿದ್ದಾರೆ.