×
Ad

2015ರಲ್ಲಿ ಕಳವಾದ 61 ಲಕ್ಷ ರೂ. ವೌಲ್ಯದ ಸೊತ್ತು ಪತ್ತೆ

Update: 2016-01-14 23:52 IST

 ಮಂಗಳೂರು, ಜ.14: ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 2015ನೆ ಸಾಲಿನಲ್ಲಿ ಕಳವು ಹಾಗೂ ದರೋಡೆ ಆರೋಪಿಗಳಿಂದ ವಶಪಡಿಸಿಕೊಳ್ಳಲಾದ 61 ಲಕ್ಷ ರೂ.ಚರಾಸ್ತಿಗಳಲ್ಲಿ ನ್ಯಾಯಾಲಯದ ಅನುಮತಿ ಪಡೆದು 55 ಲಕ್ಷ ರೂ. ಸೊತ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ತಿಳಿಸಿದರು. ಜಿಲ್ಲಾ ಎಸ್ಪಿ ಕಚೇರಿ ಎದುರು ನ್ಯಾಯಾಲಯದಿಂದ ಇತ್ಯರ್ಥಗೊಂಡ ಕಳವು ಪ್ರಕರಣಗಳ ಸೊತ್ತುಗಳನ್ನು ಕೆಲ ಮಾಲಕರಿಗೆ ಸಾಂಕೇತಿಕವಾಗಿ ಹಸ್ತಾಂತರಿಸಿ ಅವರು ಮಾತನಾಡಿದರು. ಹಸ್ತಾಂತರಿಸಲಾದ ಸೊತ್ತುಗಳಲ್ಲಿ ನಗದು, ಚಿನ್ನಾಭರಣ, ವಾಹನ, ಅಡಕೆ, ರಬ್ಬರ್, ಪೂಜಾ ಸಾಮಗ್ರಿಗಳು ಸೇರಿವೆ. ಆರೋಪಿಗಳಿಂದ ಪತ್ತೆಯಾಗಿರುವ ಬಾಕಿ ಉಳಿದಿರುವ ಸೊತ್ತುಗಳನ್ನು ನ್ಯಾಯಾಲಯದಿಂದ ಅನುಮತಿ ದೊರೆತಾಕ್ಷಣ ಹಸ್ತಾಂತರಿಸುವುದಾಗಿ ಡಾ. ಶರಣಪ್ಪ ತಿಳಿಸಿದರು. ಇಂಟ್ರೂಡರ್ ಅಲರಾಂ ಬಗ್ಗೆ ಮಾಹಿತಿ

 
ಈ ಸಂದರ್ಭ ಮನೆ, ಕಚೇರಿ, ಧಾರ್ಮಿಕ ಸ್ಥಳಗಳು ಮುಂತಾದ ಕಡೆಗಳಿಗೆ ಅಳವಡಿಸಲು ಪೂರಕವಾದ ಅತ್ಯಾಧುನಿಕ ಇಂಟ್ರೂಡರ್ ಅಲರಾಂ, ಸಿಸಿ ಕ್ಯಾಮರಾಗಳನ್ನು ಎಸ್ಪಿ ಕಚೇರಿಯಲ್ಲಿ ಪರಿಚಯಿಸಲಾಯಿತು. ಅಲರಾಂನಲ್ಲಿ ಸೆನ್ಸಾರ್ ಅಳವಡಿಸಲಾಗಿದ್ದು, ಏಕ ಕಾಲದಲ್ಲಿ 15ರಷ್ಟು ಮೊಬೈಲ್ ಸಂಖ್ಯೆಗಳಿಗೆ ಸಂದೇಶ ಹಾಗೂ ಕರೆ ಹೋಗುವ ವ್ಯವಸ್ಥೆ ಇದರಲ್ಲಿದೆ. ಈ ವ್ಯವಸ್ಥೆಯನ್ನು ಅಳವಡಿಸುವವರು ಸ್ಥಳೀಯ ಪೊಲೀಸ್ ಠಾಣೆಯ ಸಂಖ್ಯೆಯನ್ನು ಅಳವಡಿಸಿಕೊಂಡಲ್ಲಿ ಕಳ್ಳತನದ ಸಂದರ್ಭ ಅಲ್ಲಿಗೂ ಕರೆ ಹೋಗಲಿದೆ. ಇದರಿಂದ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್, ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್, ಪುತ್ತೂರು ಎಎಸ್ಪಿ ರಿಷ್ಯಂತ್ ಹಾಗೂ ಜಿಲ್ಲೆಯ ಎಲ್ಲ ಠಾಣೆಗಳ ಇನ್‌ಸ್ಪೆಕ್ಟರ್, ಎಸ್ಸೈ ಉಪಸ್ಥಿತರಿದ್ದರು.
ಕಳವು ತಡೆ ಬಗ್ಗೆ ಜಾಗರೂಕತೆ ವಹಿಸಿ


ಕಳ್ಳತನ, ಅಪರಾಧ ತಡೆಯಲು ಮುಂಜಾಗ್ರತೆ ವಹಿಸುವುದು ಅತೀ ಅಗತ್ಯ. ಮಳೆಗಾಲದಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಸಿಸಿ ಕ್ಯಾಮರಾ, ಭದ್ರ ಬಾಗಿಲುಗಳನ್ನು ಅಳವಡಿಸಿ ಮುಂಜಾಗರೂಕತೆ ವಹಿಸುವ ಮೂಲಕ ಕಳ್ಳತನ ಪ್ರಕರಣಗಳನ್ನು ತಡೆಯಬೇಕು ಎಂದು ಎಸ್ಪಿ ಡಾ. ಶರಣಪ್ಪ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News