‘ಹೆಣ್ಣುಮಕ್ಕಳ ಬೆಳವಣಿಗೆಗೆ ಪೂರಕ ವಾತಾವರಣ ಇಂದಿನ ಅಗತ್ಯ’
‘ಹೆಣ್ಣು ಮಗುವನ್ನು ರಕ್ಷಿಸಿ’ ವಿಚಾರಸಂಕಿರಣ
ಉಡುಪಿ, ಜ.14: ಹೆಣ್ಣುಮಕ್ಕಳ ಸುರಕ್ಷತೆಗೆ ಇಂದು ಹಲವಾರು ಕಾಯ್ದೆಗಳಿವೆ. ಆದ್ದರಿಂದ ಹೆಣ್ಣುಮಕ್ಕಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಇಂದಿನ ಅಗತ್ಯವಾಗಿದೆ ಎಂದು ಉಡುಪಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ನಾಗಜ್ಯೋತಿ ಕೆ.ಎ. ಹೇಳಿದ್ದಾರೆ.
ಗುರುವಾರ ಬ್ರಹ್ಮಗಿರಿ ಬಳಿ ಇರುವ ಬಾಲ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ‘ಹೆಣ್ಣು ಮಗುವನ್ನು ರಕ್ಷಿಸಿ’ ವಿಚಾರ ಸಂಕಿರಣವನ್ನು ಉದ್ಘಾ ಟಿಸಿ ಅವರು ಮಾತನಾಡುತ್ತಿದ್ದರು.
ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ದೇಶದ ಸಂವಿಧಾನ ಕಾನೂನು, ಕಾಯ್ದೆಯನ್ನು ರೂಪಿಸಿದ್ದು, ಮಹಿಳೆಯರು ಈ ಮೇಲಿನ ಅಂಶ ಗಳನ್ನು ಅರಿತರೆ ಹಕ್ಕು ಮತ್ತು ಕರ್ತವ್ಯಗಳನ್ನು ಉತ್ತಮವಾಗಿ ನಿಭಾಯಿಸಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ವಕೀಲರ ಸಂಘದ ಅಧ್ಯಕ್ಷ ದಯಾನಂದ ಕೆ. ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಎಲ್. ಗೊನ್ಸಾಲಿಸ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿದ ನ್ಯಾಯವಾದಿ ನಾಗರಾಜ ಬಿ. ‘ಹೆಣ್ಣು ಮಗುವಿನ ರಕ್ಷಣೆ ಮತ್ತು ಕಾನೂನು’ ಕುರಿತು ಮಾತನಾಡಿದರು. ವೀಕ್ಷಣಾಲಯದ ಅಧೀಕ್ಷಕಿ ಜಯಲಕ್ಷ್ಮೀ ರಾವ್ ಸ್ವಾಗತಿಸಿದರು.
ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ತಾಲೂಕಿನ ಸ್ತ್ರೀ ಶಕ್ತಿ ಗುಂಪುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.