ಗುರಿ ಸಾಧನೆಗೆ ಬದ್ಧತೆಯೊಂದಿಗೆ ಸತತವಾಗಿ ಪ್ರಯತ್ನಿಸಿ: ಎಸ್ಪಿ ಅಣ್ಣಾಮಲೈ
ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗಾಗಿ ಬದ್ಧತೆಯೊಂದಿಗೆ ಸತತ ಪರಿಶ್ರಮ ಪಡಬೇಕು ಮತ್ತು ನಕಾರಾತ್ಮಕ ಚಿಂತನೆಗಳನ್ನು ಬಿಟ್ಟುಬಿಡಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. ಅಜ್ಜರಕಾಡಿನ ಪುರಭವನದಲ್ಲಿ ಗುರುವಾರ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಲಯನ್ಸ್ ಕ್ಲಬ್ ಪರ್ಕಳ ಹಾಗೂ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ನಡೆದ ‘ಯುವ ಸಪ್ತಾಹ-2016’ ಕಾರ್ಯಕ್ರಮದಲ್ಲಿ ‘ದೇಶ ಕಟ್ಟುವಲ್ಲಿ ಯುವಜನತೆಯ ಪಾತ್ರ’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
ಯಾವುದೇ ಕ್ಷೇತ್ರದಲ್ಲಿ ನಿಗದಿತ ಗುರಿ ಸಾಧನೆಗೆ 10,000 ಗಂಟೆಗಳ ಕಾಲ ಶ್ರಮಪಟ್ಟರೆ ನಿಶ್ಚಯವಾಗಿ ಸಾಧಿಸಲು ಸಾಧ್ಯ. ವಿಶ್ವದಲ್ಲಿ ಎಲ್ಲಾ ರಂಗಗಳಲ್ಲಿಯೂ ಸಾಧನೆ ಮಾಡಿರುವ ಪ್ರಸಿದ್ಧ ವ್ಯಕ್ತಿಗಳ ಸಾಧನೆಯನ್ನು ಅವಲೋಕಿಸಿದಾಗ ಕಂಡುಬರುವ ಪ್ರಮುಖ ಸಮಾನ ಅಂಶ ಅವರ ಪರಿಶ್ರಮ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಶ್ರಮದಿಂದ ತಮ್ಮ ನಿಶ್ಚಿತ ಗುರಿ ತಲುಪಲು ಸಾಧ್ಯವಿದೆ ಎಂದು ಅಣ್ಣಾಮಲೈ ಹೇಳಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಅಣ್ಣಾಮಲೈ ಭಾಗವಹಿಸಿದರು. ಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ. ಜಗದೀಶ ರಾವ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಅರುಣ್ ಕುಮಾರ್, ಸುರೇಶ್ ಪ್ರಭು ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್‌ಕುಮಾರ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.