ಕೋಡಿಯಲ್ಲಿ ಜಗತ್ತಿನ ಪ್ರಪ್ರಥಮ ಪರಿಸರ ಸ್ನೇಹಿ ಹಸಿರು ಮಸೀದಿ
- ನಝೀರ್ ಪೊಲ್ಯ
ಕುಂದಾಪುರ, ಜ.14: ಉಡುಪಿ ಜಿಲ್ಲೆಯ ಕುಂದಾಪುರದ ಕಡಲ ಕಿನಾರೆಯಲ್ಲಿರುವ ಕೋಡಿ ಎಂಬ ಪುಟ್ಟ ಊರು ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಮಾಡಲು ಹೊರಟಿದೆ. ಅದಕ್ಕೆ ಕಾರಣವೂ ಅತ್ಯಂತ ವಿಶಿಷ್ಟವಾಗಿದೆ. ಇದೇ ಮೊದಲ ಬಾರಿ ಇಸ್ಲಾಮಿಕ್ ಆರ್ಕಿಟೆಕ್ಚರ್ ಹಾಗೂ ಅತ್ಯಾಧುನಿಕ ಪರಿಸರ ಸ್ನೇಹಿ ನಿರ್ಮಾಣದ ತಂತ್ರಜ್ಞಾನಗಳ ಸಂಗಮದಲ್ಲಿ ಆಕರ್ಷಕ ವಿನ್ಯಾಸದ ಮಾದರಿ ‘ಹಸಿರು ಮಸೀದಿ’ಯೊಂದು ಕೋಡಿಯಲ್ಲಿ ಸಿದ್ಧವಾಗಿದ್ದು ಇಂದು ಲೋಕಾರ್ಪಣೆಗೊಳ್ಳಲಿದೆ. ಈ ‘ಹಸಿರು ಮಸೀದಿ’ಯ ಹೆಸರು ಬದ್ರಿಯಾ ಜುಮಾ ಮಸ್ಜಿದ್.
ಪರಿಸರ ಸ್ನೇಹಿ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಕೋಡಿ ಮೂಲದ ಬೆಂಗಳೂರಿನ ಬ್ಯಾರೀಸ್ ಗ್ರೂಪ್ ಈ ವಿಶಿಷ್ಟ ಮಸೀದಿಯ ನಿರ್ಮಾಪಕರು. ಖ್ಯಾತ ಆರ್ಕಿಟೆಕ್ಟ್ ಗಳಾದ ಸಂದೀಪ್ ಜೆ. ಹಾಗೂ ಮನೋಜ್ ಲದ್ಹಾದ್ ಅವರು ಮಸೀದಿಯ ವಿನ್ಯಾಸ ಮಾಡಿದ್ದಾರೆ. ‘‘ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಈ ಮಸೀದಿಯ ಕಾಮಗಾರಿ ಮೂರು ವರ್ಷಗಳ ಕಾಲ ನಡೆದಿದ್ದು, ಇದೀಗ ಪೂರ್ಣಗೊಂಡಿದೆ. ಇಂದಿನ ಬಹುದೊಡ್ಡ ಸಮಸ್ಯೆಯಾಗಿರುವ ಜಾಗತಿಕ ತಾಪಮಾನವನ್ನು ಯಾವ ರೀತಿ ಕಡಿಮೆ ಮಾಡಬಹುದೆಂಬ ಸೂತ್ರಗಳು ಈ ಮಸೀದಿ ಕಟ್ಟಡದಲ್ಲಿವೆ. ಈ ಮಸೀದಿಯು 15,000 ಚದರ ಅಡಿ ವಿಸ್ತೀರ್ಣ ಹೊಂದಿದೆ ಎಂದು ಬ್ಯಾರೀಸ್ ಗ್ರೂಪ್ ಹಾಗೂ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನ ರಾಜ್ಯಾಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮಸೀದಿಯ ಅಧ್ಯಕ್ಷ ಹಾಜಿ ಮಾಸ್ಟರ್ ಮಹಮೂದ್ ಉಪಸ್ಥಿತರಿದ್ದರು.
ಹತ್ತು ಹಲವು ವೈಶಿಷ್ಟಗಳು ಹಾಗೂ ಪ್ರಥಮಗಳ ದಾಖಲೆಯ ಕೋಡಿಯ ಪರಿಸರ ಸ್ನೇಹಿ ‘ಹಸಿರು ಮಸೀದಿ’ ಈಗಾಗಲೇ ಎಲ್ಲ ಧರ್ಮಗಳ ಜನರನ್ನು ಸೆಳೆಯುವ ಹೆಗ್ಗುರುತಾಗಿ ಮಾರ್ಪಟ್ಟಿದೆ. ಮಸೀದಿಯ ವಿಶೇಷತೆಗಳು: ಈ ಮಸೀದಿಯಲ್ಲಿ ಪ್ರಾಕೃತಿಕ ನಿಯಮಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡು ಕಟ್ಟಡ ಸದಾ ತಂಪಾಗಿರುವಂತೆ ನೋಡಿಕೊಳ್ಳಲಾಗಿದೆ. ಮಸೀದಿಯ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಗೋಡೆ ಬದಲು ಜಾಲಿಗಳನ್ನು ಅಳವಡಿಸಲಾಗಿದೆ. ಇದರಿಂದ ಮಸೀದಿಯೊಳಗೆ ಸದಾ ಗಾಳಿ ಹಾಗೂ ಬೆಳಕು ಬರುತ್ತಿರುತ್ತವೆ. ಸುತ್ತಮುತ್ತಲೂ ಹಸಿರು ಮರಗಿಡಗಳು, ನೀರಿನ ಟ್ಯಾಂಕ್‌ಗಳಿರುವುದರಿಂದ ಮಸೀದಿಯೊಳಗೆ ತಾಪಮಾನ ಏರಿಕೆಯು ಕನಿಷ್ಠ ಮಟ್ಟದಲ್ಲಿರುತ್ತದೆ. ‘ಎಲ್’ ಆಕಾರದಲ್ಲಿ ಮಸೀದಿ ಕಟ್ಟಡವನ್ನು ನಿರ್ಮಿಸಲಾಗಿದೆ. ಸಭಾಂಗಣವನ್ನು ನೆಲಮಟ್ಟಕ್ಕಿಂತ ಎತ್ತರದಲ್ಲಿ ನೈಸರ್ಗಿ ಕವಾಗಿ ತಂಪಾಗಿರುವಂತೆ ನಿರ್ಮಿಸಲಾಗಿದೆ.
ಬಿಳಿ ಚೀನಾ ಟೈಲ್ಸ್‌ಗಳನ್ನು ಹಾಕಿ ವಿಶೇಷ ಟರ್ಬೊ ದ್ವಾರಗಳನ್ನು ಅಳವಡಿಸಿರುವ ತಾರಸಿ, ಇಡೀ ಮಸೀದಿಯನ್ನು ಬಿಸಿಲಿನ ತಾಪದಿಂದ ಮುಕ್ತಗೊಳಿಸಿ ತಂಪಾಗಿರಿಸುತ್ತಿದೆ. ಕಟ್ಟಡ ನಿರ್ಮಾಣಕ್ಕೆ ವಿಶೇಷ ಸ್ವರೂಪದ (ನಾನ್ ಕಂಡಕ್ಟಿಂಗ್ ಗ್ಲಾಸ್ ರಿಇನ್‌ಫೋರ್ಸ್ ಡ್) ಕಾಂಕ್ರಿಟ್ ಬಳಸಿ ಸ್ವಾಭಾವಿಕ ಗಾಳಿ ಮತ್ತು ಬೆಳಕು ಧಾರಾಳ ಸಿಗುವಂತೆ ವಿನ್ಯಾಸಗೊಳಿಸಲಾಗಿದೆ. ಈ ಮಸೀದಿಯ 70 ಅಡಿ ಎತ್ತರದ ಮಿನಾರ ಕೇವಲ ಪ್ರಾರ್ಥನೆಗೆ ಕರೆ ನೀಡಲು ಹಾಗೂ ಸೌಂದರ್ಯಕ್ಕೆ ಸೀಮಿತವಾಗಿರದೆ, ಪ್ರಾರ್ಥನಾ ಸಭಾಂಗಣವನ್ನು ತಣ್ಣಗಾಗಿಸುತ್ತಿವೆ. ಈ ಮಿನಾರದ ಮೇಲೆಯೇ ಗಾಳಿಯನ್ನು ಬಳಸಿ ವಿದ್ಯುತ್ ಉತ್ಪಾದಿಸುವ ವಿಂಡ್ ಟರ್ಬೈನ್ ಅನ್ನು ಅಳವಡಿಸಲಾಗಿದೆ. ಮಸೀದಿ ಸಭಾಂಗಣದಲ್ಲಿ ಸುಮಾರು ಎರಡು ಸಾವಿರದಷ್ಟು ಜನ ನಮಾಝ್ ನಿರ್ವಹಿಸಬಹುದು. ಮಸೀದಿಯ ಪ್ರಮುಖ ಭಾಗಗಳಿಗೆ ಸೂರ್ಯನ ಕಿರಣಗಳನ್ನು ಹೀರಿಕೊಳ್ಳದ ಬಿಳಿ ಬಣ್ಣವನ್ನು ಬಳಿಯಲಾಗಿದೆ.
ಮಸೀದಿಯ ಗೋಡೆಗಳಲ್ಲಿ ಕುರ್‌ಆನ್ ಸೂಕ್ತಗಳನ್ನು ಕಲಾತ್ಮಕವಾಗಿ ಬರೆಯಲಾಗಿರುವ ಅರೆಬಿಕ್ ಭಾಷೆಯ ಆಕರ್ಷಕ ಕ್ಯಾಲಿಗ್ರಫಿ ಗಮನ ಸೆಳೆಯುತ್ತವೆೆ. ಬೆಂಗಳೂರಿನ ಬ್ಯಾರೀಸ್ ಗ್ರೂಪ್‌ನ ಇನ್‌ಸ್ಟಿಟ್ಯೂಟ್ ಆಫ್ ಇಂಡೋ ಇಸ್ಲಾಮಿಕ್ ಆರ್ಟ್ ಆ್ಯಂಡ್ ಕಲ್ಚರ್‌ನ ಪ್ರಾಂಶುಪಾಲ ಮುಖ್ತಾರ್ ಅಹ್ಮದ್ ಈ ಕಲಾಕೃತಿಗಳನ್ನು ರಚಿಸಿದ್ದಾರೆ.
ಮಸೀದಿ ಇತಿಹಾಸ: ಸೈಯದ್ ಮುಹಮ್ಮದ್ ಬ್ಯಾರಿಯವರ ಅಜ್ಜ ಸೂಫಿ ಸಾಹೇಬ್ ಹಜ್ ಯಾತ್ರೆಗಾಗಿ ಹಣ ಸಂಗ್ರಹಿಸಿದ್ದರು. ಆದರೆ ಅನಾರೋಗ್ಯದಿಂದಾಗಿ ಅವರಿಗೆ ಹಜ್ ನಿರ್ವಹಿಸಲು ಸಾಧ್ಯವಾಗಿರಲಿಲ್ಲ. ಆ ಹಣದಿಂದ ಅವರು ಕೋಡಿಯಲ್ಲಿ ಸುಮಾರು 80 ವರ್ಷಗಳ ಹಿಂದೆ ಈ ಮಸೀದಿಯನ್ನು ನಿರ್ಮಿಸಿದ್ದರು. ನಂತರ ಅಂದರೆ 40 ವರ್ಷಗಳ ಹಿಂದೆ ಈ ಮಸೀದಿಯನ್ನು ನವೀಕರಣಗೊಳಿಸಲಾಯಿತು. ಇದೀಗ ಸೂಫಿ ಸಾಹೇಬರ ಮೊಮ್ಮಕ್ಕಳು ಆ ಮಸೀದಿಯನ್ನು ಮತ್ತೆ ಸಂಪೂರ್ಣವಾಗಿ ನವೀಕರಣಗೊಳಿಸಿ ಅದನ್ನು ಇಡೀ ವಿಶ್ವವೇ ಗುರುತಿಸುವಂತೆ ಮಾಡಿದ್ದಾರೆ. ಅಜ್ಜ ನೆಟ್ಟ ಮಾವಿನ ಮರ ಹಾಗೂ ಅಪ್ಪ ನೆಟ್ಟ ತೆಂಗಿನಮರವನ್ನು ಕಡಿಯದೆ ಅದರ ಮಧ್ಯದಲ್ಲೇ ಮಸೀದಿ ಕಟ್ಟಡ ನಿರ್ಮಿಸಿರುವುದು ಅತ್ಯಂತ ವಿಶೇಷವಾಗಿದೆ. ನಮ್ಮ ತಂದೆಯವರೇ ನಮಗೆ ಪರಿಸರದೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿ ಹಾಗೂ ಅದರ ಬಗ್ಗೆ ವಿಶೇಷ ಕಾಳಜಿ ಮೂಡಿಸಿದವರು ಎಂದು ಸೈಯದ್ ಮುಹಮ್ಮದ್ ಬ್ಯಾರಿ ತಿಳಿಸಿದರು.
ಹಲವು ಪ್ರಥಮಗಳು
ಪ್ರಾಕೃತಿಕ ನಿಯಮಗಳ ಅನುಷ್ಠಾನದಿಂದ ಕಟ್ಟಡ ಸದಾ ತಂಪಾಗಿರುತ್ತದೆ.
ಮಸೀದಿಯೊಳಗೆ ತಾಪಮಾನ ಏರಿಕೆ ಕನಿಷ್ಠ ಮಟ್ಟದಲ್ಲಿರುತ್ತದೆ.
ಮಸೀದಿಯೊಳಗೆ ಧಾರಾಳ ಗಾಳಿ-ಬೆಳಕು ಸಂಚಾರದ ವ್ಯವಸ್ಥೆ ಇದೆ.
ಮಿನಾರದ ಮೇಲೆ ವಿದ್ಯುತ್ ಉತ್ಪಾದಿಸುವ ವಿಂಡ್ ಟರ್ಬೈನ್ ಅಳವಡಿಸಲಾಗಿದೆ.
ಸೌರ, ಪವನ ಶಕ್ತಿಯಿಂದ ವರ್ಷವಿಡೀ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್‌ಅನ್ನು ಉತ್ಪಾದಿಸಲಾಗುತ್ತದೆ.
ಹೆಚ್ಚುವರಿ ವಿದ್ಯುತ್‌ಅನ್ನು ಸರಕಾರದ ಗ್ರಿಡ್‌ಗೆ ವರ್ಗಾಯಿಸಲಾಗುತ್ತದೆ.
ವರ್ಷವಿಡೀ ವಿದ್ಯುತ್ ಉತ್ಪಾದನೆ
ಕಡಲ ಕಿನಾರೆಯ ಕೋಡಿಯಲ್ಲಿ ಮಳೆಗಾಲದಲ್ಲಿ ಭಾರೀ ಗಾಳಿ ಹಾಗೂ ಬೇಸಿಗೆ ಕಾಲದಲ್ಲಿ ತೀವ್ರ ಬಿಸಿಲು ಇರುವುದರಿಂದ ಈ ಮಸೀದಿಯಲ್ಲಿ ಎರಡು ರೀತಿಯಿಂದಲೂ ವಿದ್ಯುತ್ ಉತ್ಪಾದನೆಯನ್ನು ಮಾಡಲಾಗುತ್ತಿದೆ. ಪವನ ಮತ್ತು ಸೌರ ವಿದ್ಯುತ್‌ನಿಂದಾಗಿ ಇಲ್ಲಿ ವರ್ಷವಿಡೀ ಯಾವುದೇ ವಿದ್ಯುತ್ ಕೊರತೆ ಎದುರಾಗುವುದಿಲ್ಲ ಎಂದವರು ವಿಶ್ವಾಸ ವ್ಯಕ್ತಪಡಿಸಿದರು. ಸಾಮಾನ್ಯವಾಗಿ 15,000 ಚದರ ಅಡಿಯ ಕಟ್ಟಡಕ್ಕೆ ಸುಮಾರು 30ರಿಂದ 40 ಕಿಲೊ ವ್ಯಾಟ್‌ವರೆಗೆ ವಿದ್ಯುತ್ ಬೇಕಾಗುತ್ತದೆ. ಆದರೆ ಈ ಕಟ್ಟಡಕ್ಕೆ ಕೇವಲ ಆರು ಕಿಲೊ ವ್ಯಾಟ್ ವಿದ್ಯುತ್ ಮಾತ್ರ ಸಾಕಾಗುತ್ತದೆ. ಅದಕ್ಕಾಗಿ ಎಲ್‌ಇಡಿ ಲೈಟ್‌ಗಳನ್ನು ಬಳಸಲಾಗುತ್ತಿದೆ. ಮಸೀದಿಯಲ್ಲಿ ದಿನಕ್ಕೆ ಐದು ಬಾರಿ ನಮಾಝ್ ನಿರ್ವಹಿಸುವಾಗ ಮಾತ್ರ ವಿದ್ಯುತ್ತನ್ನು ಬಳಸಲಾಗುತ್ತದೆ. ಉಳಿದ ಸಮಯವು ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗುತ್ತದೆ. ಸೌರ ಮತ್ತು ಪವನ ಶಕ್ತಿಯ ಬಳಕೆಯಿಂದ ಮಸೀದಿಯಲ್ಲಿ ಅಧಿಕ ವಿದ್ಯುತ್ ಉತ್ಪಾದನೆಯಾಗಲಿದೆ. ಹೆಚ್ಚುವರಿ ವಿದ್ಯುತ್ತನ್ನು ಸರಕಾರದ ಗ್ರಿಡ್‌ಗೆ ನೀಡಲಾಗುವುದು. ಇದರಿಂದ ಮಸೀದಿಗೆ ಮುಂದಿನ 25 ವರ್ಷಗಳ ಕಾಲ ಸರ್ಟಿಫೈಡ್ ಎಮಿಶನ್ ರಿಡಕ್ಷನ್ ಕ್ರೆಡಿಟ್ ದೊರೆಯಲಿದೆ ಎಂದು ಸೈಯದ್ ಮುಹಮ್ಮದ್ ಬ್ಯಾರಿ ತಿಳಿಸಿದ್ದಾರೆ.
ಇಂದು ಮಸೀದಿ ಲೋಕಾರ್ಪಣೆ ಈ ಪ್ರಪ್ರಥಮ ಪರಿಸರ ಸ್ನೇಹಿ ಹಸಿರು ಮಸೀದಿಯ ಲೋಕಾರ್ಪಣೆ ಸಮಾರಂಭ ಜ.15ರಂದು ಪೂರ್ವಾಹ್ನ 11 ಗಂಟೆಗೆ ಪ್ರಾರಂಭವಾಗಲಿದೆ.
ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಹಾಗೂ ಲಕ್ನೋದ ದಾರುಲ್ ಉಲೂಮ್ ನದ್ವತುಲ್ ಉಲಮಾದ ಮುಖ್ಯಸ್ಥ ಹಝ್ರತ್ ಮೌಲಾನ ಸಯ್ಯದ್ ಮುಹಮ್ಮದ್ ರಾಬೆಅ್ ಹಸನಿ ನದ್ವಿ, ಬೆಂಗಳೂರು ದಾರುಲ್ ಉಲೂಮ್ ಸಬೀಲುರ್ ರಶಾದ್‌ನ ಪ್ರಾಂಶುಪಾಲ ಮುಫ್ತಿ ಅಶ್ರಫ್ ಅಲಿ ಬಾಖವಿ, ಉಡುಪಿ ಜಿಲ್ಲಾ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಭಾಗವಹಿಸಲಿದ್ದಾರೆ.
ಸಂಜೆ 4ರಿಂದ 6ರವರೆಗೆ ಕೋಡಿಯ ಬ್ಯಾರೀಸ್ ಕಾಲೇಜು ಆವರಣದಲ್ಲಿ ದೇಶದ ವಿವಿಧೆಡೆಗಳಿಂದ ಆಗಮಿಸಿದ ತಜ್ಞರಿಂದ ಕುರ್‌ಆನ್ ವಾಚನ ನಡೆಯಲಿದೆ.