×
Ad

ವೃದ್ದ ದಂಪತಿಗಳ ಕೊಲೆ ಪ್ರಕರಣ: ಪ್ರಮುಖ ಆರೋಪಿ ಸೆರೆ

Update: 2016-01-15 10:53 IST

ಬೆಳ್ತಂಗಡಿ: ತಾಲೂಕನ್ನು ಬೆಚ್ಚಿ ಬೀಳಿಸಿದ್ದ ಕಕ್ಕಿಂಜೆ ವೃದ್ದ ದಂಪತಿಗಳ ಕೊಲೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಪೋಲೀಸರು ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.

ಜ 10 ರಂದು ರಾತ್ರಿ ವೃದ್ದ ದಂಪತಿಗಳು ಮಾತ್ರ ಇದ್ದ ಮನೆಗೆ ನುಗ್ಗಿ ವರ್ಗೀಸ್ ಹಾಗೂ ಪತ್ನಿ ಏಲಿಯಾಮ್ಮ ಅವರನ್ನು ಹತ್ಯೆ ಮಾಡಿ ಚಿನ್ನಾಭರಣ ಹಾಗೂ ನಗದು ದೋಚಿದ್ದರು.   

  ಕೆಲವೊಂದು ಸುಳಿವುಗಳು ದೊರೆತ ಹಿನ್ನಲೆಯಲ್ಲಿ ಗದಗ ಮೂಲದ ವ್ಯಕ್ತಿಯೋರ್ವನನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ಕಕ್ಕಿಂಜೆ ಸಮೀಪ ಕಳೆದ ಕೆಲ ಸಮಯದಿಂದ ಅಣೆಕಟ್ಟು ನಿರ್ಮಾಣದ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕೆಲ ದಿನಗಳಿಂದ ವೃದ್ದರು ಇಬ್ಬರು ಮಾತ್ರ ಇರುವ ಮನೆಯನ್ನು ಗಮನಿಸುತ್ತಾ ಬಂದಿದ್ದ ಎನ್ನಲಾಗಿದ್ದು ಹಗಲು ವೇಳೆ ಇಲ್ಲಿ ಬಂದು ಬೇರೆ ಯಾರು ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡಿದ್ದ ಬಳಿಕ ಘಟನೆಯ ದಿನ ದಾರಿ ತಪ್ಪಿ ಬಂದುದಾಗಿ ಹೇಳಿ ವರ್ಗೀಸ್ ಅವರ ಮನೆಗೆ ಬಂದಿದ್ದಾನೆ ಎನ್ನಲಾಗಿದ್ದು ದಾರಿ ತೋರಿಸಲು ವರ್ಗೀಸ್ ಅವರನ್ನು ಕರೆದುಕೊಂಡು ರಸ್ತೆ ಸಮೀಪಕ್ಕೆ ಬಂದು ಅಲ್ಲಿ ಅವರನ್ನು ಹತ್ಯೆ ಮಾಡಿದ್ದಾನೆ ಬಳಿಕ ಮನೆಗೆ ಹೋಗಿ ಮನೆಯಲ್ಲಿದ್ದ ಏಲಿಯಾಮ್ಮ ಅವರನ್ನೂ ಹತ್ಯೆ ಮಾಡಿದ್ದಾನೆ ಎಂದು ವಿಚಾರಣೆಯ ವೇಳೆ ಆರೋಪಿ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.

ಪೊಲೀಸ್ ವಶದಲ್ಲಿರುವ ವ್ಯಕ್ತಿ ಕ್ರಿಮಿನಲ್ ಹಿನ್ನಲೆಯವನಾಗಿದ್ದು ಆತನ ಮೇಲೆ ಕಳ್ಳತನದ ಹಲವಾರು ಪ್ರಕರಣಗಳಿರುವುದಾಗಿ ಮಾಹಿತಿಗಳು ಲಭ್ಯವಾಗುತ್ತಿದೆ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರ ಮಾರ್ಗದರ್ಶನದಲ್ಲಿ ಬಂಟ್ವಾಳ ಎಎಸ್‌ಪಿ ರಾಹುಲ್ ಕುಮಾರ್ ಅವರು ತನಿಖೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News