ಎಂಡೋಸಂತ್ರಸ್ತರಿಗೆ ಮಾಶಾಸನ ಸಮಸ್ಯೆ ತಿಳಿಸಿದರೆ ಪರಿಹಾರಕ್ಕೆ ಕ್ರಮ: ಸಚಿವ ಖಾದರ್
ಮಂಗಳೂರು, ಜ.15: ದ.ಕ. ಜಿಲ್ಲೆಯ ಎಂಡೋ ಪೀಡಿತರಿಗೆ ಮಾಶಾಸನದಲ್ಲಿ ವಿಳಂಬ ಹಾಗೂ ಕೆಲವರಿಗೆ ಮಾಶಾಸನ ದೊರೆಯುತ್ತಿಲ್ಲ ಎಂಬ ಆರೋಪದ ಬದಲು ಆ ಬಗ್ಗೆ ಪಟ್ಟಿ ನೀಡಿದರೆ ಅಥವಾ ಸಮಸ್ಯೆ ಹಾಗೂ ಲೋಪದೋಷಗಳ ಬಗ್ಗೆ ತನಗೆ ತಿಳಿಸಿದ್ದಲ್ಲಿ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಆಶ್ವಾಸನೆ ನೀಡಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಖಾದರ್, ಮಾಶಾಸನ ದೊರೆಯದ ಅಥವಾ ಲೋಪದೋಷಗಳ ಬಗ್ಗೆ ತನಗೆ ಈವರೆಗೂ ಯಾರಿಂದಲೂ ದೂರು ಬಂದಿಲ್ಲ. ಮೂರು ತಿಂಗಳ ಹಿಂದೆ 198 ಮಂದಿಗೆ ಮಾಶಾಸನ ದೊರೆಯದ ಕುರಿತಂತೆ ಕ್ರಮ ಕೈಗೊಳ್ಳಲಾಗಿದೆ.
ಸಮಸ್ಯೆ ಗೊತ್ತಾದರೆ ತಾನೆ ಪರಿಹಾರ ನೀಡಲು ಸಾಧ್ಯ. ಕೇವಲ ಝೆರಾಕ್ಸ್ ಪ್ರತಿಗಳನ್ನು ಹಿಡಿದು ರಾಜಕೀಯ ಪ್ರೇರಿತರಾಗಿ ಆರೋಪ ಮಾಡುವುದು ಸರಿಯಲ್ಲ. ಬಾಕಿ ಇದ್ದವರ ಬಗ್ಗೆ ನನಗೆ ಮಾಹಿತಿ ನೀಡಿ ಎಂದು ಅವರು ಹೇಳಿದರು. ಪ್ರಸ್ತುತ ಮಾಶಾಸನ ನೀಡುವ ಜವಾಬ್ಧಾರಿ ಕಂದಾಯ ಇಲಾಖೆಗೆ ಸೇರಿದ್ದಾಗಿದೆ. ಹಾಗಿದ್ದರೂ ಎಂಡೋ ಪೀಡಿತರ ಆರೋಗ್ಯದ ಜವಾಬ್ಧಾರಿ ತನ್ನ ಇಲಾಖೆಯದ್ದಾಗಿದ್ದು, ಸಮಸ್ಯೆ ಇದ್ದಲ್ಲಿ ಬಗೆಹರಿಸಲಾಗುವುದು ಎಂದು ಅವರು ಹೇಳಿದರು.