×
Ad

ಉಡುಪಿ ಮಠದಲ್ಲಿ ಮಡೆಸ್ನಾನ- ಪಂಕ್ತಿಬೇಧ ನಿಷೇಧ ಘೋಷಣೆಗೆ ಒತ್ತಾಯ

Update: 2016-01-15 18:43 IST

ಮಂಗಳೂರು, ಜ.15: ಪರ್ಯಾಯ ಪೀಠಾರೋಹಣ ಮಾಡಲಿರುವ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಯವರು ಉಡುಪಿ ಶ್ರೀಕೃಷ್ಣ ಮಠದಲ್ಲಿ ಮಡೆಸ್ನಾನ ಮತ್ತು ಪಂಕ್ತಿಭೇದವನ್ನು ಸಂಪೂರ್ಣವಾಗಿ ನಿಷೇಧಿಸುವ ಘೋಷಣೆ ಮಾಡಬೇಕು ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಶ್ರೀರಾಮ ರೆಡ್ಡಿ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಾಮಾಜಿಕ ಸಮಾನತೆ ಹಿನ್ನೆಲೆಯಲ್ಲಿ ಮಡೆಸ್ನಾನ ಹಾಗೂ ಪಂಕ್ತಿಭೇದಕ್ಕೆ ನಿಷೇಧ ಹೇರಿದರೆ ಸ್ವಾಮೀಜಿ ಬಗ್ಗೆ ಸಮಾಜದಲ್ಲಿ ಗೌರವ ಮತ್ತಷ್ಟು ಹೆಚ್ಚಲಿದೆ ಎಂದರು. ಮಡೆಸ್ನಾನ ಹಾಗೂ ಪಂಕ್ತಿಭೇದದೊಂದಿಗೆ ಜಾತಿ ಆಧಾರದಲ್ಲಿ ಶೋಷಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಳೆದ ಆರು ವರ್ಷದಿಂದ ಸಿಪಿಐಎಂ ಹೋರಾಟ ಮಾಡುತ್ತಿದೆ ಎಂದವರು ಹೇಳಿದರು. ಪರ್ಯಾಯ ಉತ್ಸವ ಕೃಷ್ಣ ಮಠದ ಆಂತರಿಕ ವಿಷಯವಾಗಿದ್ದು, ವೈಭವೀಕರಣವನ್ನು ಸಿಪಿಐಎಂ ವಿರೋಧಿಸುತ್ತದೆ. ರಾಜ್ಯದಲ್ಲಿ ಬರಗಾಲ, ರೈತರ ಆತ್ಮಹತ್ಯೆ ಸಮಸ್ಯೆ ಗಂಭೀರವಾಗಿರುವ ಸಂದರ್ಭ ಸರಕಾರ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪರ್ಯಾಯಕ್ಕೆ ಪ್ರೋತ್ಸಾಹ ನೀಡುವುದು, ಪ್ರತಿನಿಧಿಯನ್ನು ಕಳುಹಿಸುವುದು ಖಂಡನೀಯ ಎಂದು ಅವರು ತಿಳಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ವಿಚಾರದಲ್ಲಿ ಸಂಧಾನ, ಕೋರ್ಟ್ ತೀರ್ಪು ಹಾಗೂ ರಾಜ್ಯ ಸಭೆ ಬಹುಮತ ಎಂಬುದಾಗಿ ಸ್ವಾಮೀಜಿ ತ್ರಿಸೂತ್ರ ತಿಳಿಸಿದ್ದು, ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ಸಂಧಾನದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಲ್ಲದೆ ಬಾಬರಿ ಮಸೀದಿಯನ್ನು ಒಡೆದಿರುವ ಹಿನ್ನೆಲೆಯಲ್ಲಿ ಮುಸ್ಲಿಮರು ಸಂಧಾನಕ್ಕೆ ಬರಬೇಕೆನ್ನುವುದು ಒಪ್ಪತಕ್ಕ ವಿಚಾರವಲ್ಲ ಎಂದು ಅವರು ಹೇಳಿದರು.

ಎತ್ತಿನಹೊಳೆ ಯೋಜನೆ ವಿರೋಧವಿಲ್ಲ

ಎತ್ತಿನಹೊಳೆ ಯೋಜನೆಗೆ ಸಿಪಿಐಎಂ ವಿರೋಧವಿಲ್ಲ ಎಂದು ಮತ್ತೆ ಸ್ಪಷ್ಟ ಪಡಿಸಿರುವ ಅವರು, ಈ ಯೋಜನೆಯಿಂದ ಬಯಲು ಸೀಮೆಯ ನೀರಾವರಿ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲಾರದು ಎಂದೂ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಿಪಿಐಎಂ ಪಕ್ಷದ ಮುಖಂಡರಾದ ವಸಂತ ಆಚಾರಿ, ಕೆ.ಯಾದವ ಶೆಟ್ಟಿ, ಬಿ.ಎಂ.ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News