×
Ad

ಉ.ಪ್ರ.ದಲ್ಲಿ ಕೋಮು ಹಿಂಸಾಚಾರ: ಪೊಲೀಸರು ಸಹಿತ 30 ಮಂದಿಗೆ ಗಾಯ

Update: 2016-01-15 23:27 IST

ಲಕ್ನೋ, ಜ.15: ಉತ್ತರ ಪ್ರದೇಶದ ಫತೇಪುರದ ಜಹಾನಾಬಾದ್ ಪಟ್ಟಣದ ಪ್ರಸಿದ್ಧ ಖಿಚಡಿ ಮೇಳದ ವೇಳೆ ಭುಗಿಲೆದ್ದ ಕೋಮು ಹಿಂಸಾಚಾರದಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಮಹಿಳೆಯೊಬ್ಬಳು ಕಣ್ಣೊಂದು ಕಳೆದುಕೊಂಡಿದ್ದಾರೆ.
ಸಂಬಂಧಿತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ವಿಎಚ್‌ಪಿ ಅಧ್ಯಕ್ಷ ಪ್ರವೀಣ್ ತೊಗಡಿಯಾ ಹಾಗೂ ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಆಗಮಿಸುವ ಕೇವಲ ಒಂದು ತಾಸು ಮೊದಲು ಹಿಂಸಾಚಾರ ನಡೆದಿದೆ.
ಬಲಪಂಥೀಯ ಗುಂಪೊಂದು ಖಡ್ಗ ಹಾಗೂ ಕೇಸರಿ ಬಾವುಟಗಳನ್ನು ಧರಿಸಿ ಮೆರವಣಿಗೆ ಮೂಲಕ ಜನರನ್ನು ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸುತ್ತಿದ್ದ ವೇಳೆ ಕೋಲಾಹಲ ಆರಂಭವಾಯಿತು.
ಮೆರವಣಿಗೆಯು ಪಟ್ಟಣದಲ್ಲಿ ಹಾದು ಹೋಗುತ್ತಿರುವಾಗ ಹತ್ತಾರು ಧ್ವನಿವರ್ಧಕಗಳನ್ನು ಹೊತ್ತಿದ್ದ ಟೆಂಪೋ ಒಂದನ್ನು, ವಿದ್ಯುತ್ ತಂತಿಗಳನ್ನು ಎಳೆದು ಹಿಡಿದು ಯುವಕನೊಬ್ಬ ಹಾದು ಹೋಗಲು ಅನುವು ಮಾಡಿಕೊಟ್ಟಿದ್ದನು.
ಮುಸ್ಲಿಂ ಸಮುದಾಯದ ಕೆಲವು ಸದಸ್ಯರು ಇದನ್ನು ಆಕ್ಷೇಪಿಸಿದಾಗ ಗುಂಪು ಘೋಷಣೆಗಳನ್ನು ಕೂಗತೊಡಗಿತು. ಆಗ ನಡೆದ ವಾಗ್ವಾದವು ಸಂಘರ್ಷಕ್ಕೆ ತಿರುಗಿ, ಎರಡು ಸಮುದಾಯದವರು ಪರಸ್ಪರರ ಮೇಲೆ ಗುಂಡು ಹಾರಾಟ, ಕಲ್ಲು ಹಾಗೂ ಇತರ ವಸ್ತುಗಳ ತೂರಾಟ ನಡೆಸಿದರು.
ಫತೇಪುರ ಪೊಲೀಸರು ಪ್ರಾದೇಶಿಕ ಸಶಸ್ತ್ರ ದಳದ 2 ತುಕಡಿ ಸಹಿತ ಹೆಚ್ಚುವರಿ ಬಲವನ್ನು ಪರಿಸ್ಥಿತಿ ನಿಯಂತ್ರಣಕ್ಕಾಗಿ ಕಳುಹಿಸಿದರು. ಬೆಂಕಿ ಹಚ್ಚುವಿಕೆ ಆರಂಭಿಸಿದ ದಂಗೆಕೋರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಚ್ ಮಾಡಿದರು.
 ಘಟನೆಯಲ್ಲಿ 5-6 ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಅಷ್ಟೇ ಸಂಖ್ಯೆಯ ವಾಹನಗಳನ್ನು ಹಾನಿಗೊಳಿಸಲಾಗಿದೆ. ಸುಮಾರು 40 ನಿಮಿಷ ನಡೆದ ಕಲ್ಲು ತೂರಾಟದಲ್ಲಿ ಇಬ್ಬರು ಪೊಲೀಸ್ ಉಪಾಧೀಕ್ಷರು ಗಾಯಗೊಂಡಿದ್ದಾರೆಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News