ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಚಿವ ಖಾದರ್ ದಿಢೀರ್ ಭೇಟಿ
ಉಡುಪಿ, ಜ.15: ಅಜ್ಜರಕಾಡುವಿನಲ್ಲಿರುವ ಜಿಲ್ಲಾ ಸರ ಕಾರಿ ಆಸ್ಪತ್ರೆಗೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಸಚಿವ ಯು.ಟಿ.ಖಾದರ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಸರ್ಜನ್ ಹಾಗೂ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಶಾಸಕ ಪ್ರಮೋದ್ ಮಧ್ವರಾಜ್ ಅವರೊಂದಿಗೆ ಆಸ್ಪತ್ರೆಗೆ ಆಗಮಿಸಿದ ಸಚಿವ ಖಾದರ್‌ರನ್ನು ಬರಮಾಡಿಕೊಳ್ಳಲು ಆಸ್ಪತ್ರೆಯಲ್ಲಿ ಯಾರು ಕೂಡ ಇರಲಿಲ್ಲ. ಸಚಿವರು ನೇರವಾಗಿ ಸರ್ಜನ್ ಕಚೇರಿಗೆ ತೆರಳಿದರು. ಅಲ್ಲಿ ಎಲ್ಲ ಕಚೇರಿಗೆ ಬೀಗ ಹಾಕಿರುವುದು ಕಂಡುಬಂತು. ಮುಂದೆ ವಾರ್ಡ್‌ಗಳಿಗೆ ಭೇಟಿ ನೀಡಿದ ಸಚಿವರು ರೋಗಿಗಳ ಯೋಗಕ್ಷೇಮ ವಿಚಾರಿಸಿ ದರು. ಆಸ್ಪತ್ರೆಯ ಕೊರತೆಗಳ ಬಗ್ಗೆ ಮಾಹಿತಿ ಪಡೆದು ಕೊಂಡರು.
ಈ ಸಂದರ್ಭ ಆಗಮಿಸಿದ ಸರ್ಜನ್ ಡಾ. ಮಹೇಂದ್ರ ಅವರನ್ನು ಸಚಿವರು ತೀವ್ರ ತರಾಟೆಗೆ ತೆಗೆದುಕೊಂಡರು. ಕೋಟು ಹಾಕದೆ ಬಂದ ಸರ್ಜನ್‌ಗೆ ಸೂಚನೆ ನೀಡಿದರು. ಆಸ್ಪತ್ರೆಯಲ್ಲಿ 120 ಬೆಡ್‌ಗಳಿದ್ದರೂ ದಾಖಲಾಗಿರುವುದು ಕೇವಲ 30 ಮಂದಿ ಮಾತ್ರ. ಇಲ್ಲಿನ ಅವ್ಯವಸ್ಥೆ, ಸಿಬ್ಬಂದಿಯ ನಿರ್ಲಕ್ಷದಿಂದ ಜನಸಾಮಾನ್ಯರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ಈ ವೇಳೆ ದೂರಿದರು. ಆಸ್ಪತ್ರೆಯ ಕಿಟಕಿಗಳ ಗಾಜುಗಳು ಒಡೆದಿರುವುದನ್ನು ವೀಕ್ಷಿಸಿದ ಸಚಿವರು, ಸರ್ಜನ್‌ರ ನಿರ್ಲಕ್ಷದ ಬಗ್ಗೆ ಕೆಂಡಮಂಡಲರಾದರು. ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ಕೂಡಲೇ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಸಚಿವರು ತಾಕೀತು ನೀಡಿದರು. ಬಳಿಕ ಸರ್ಜನ್ ಕಚೇರಿಯಲ್ಲಿ ವೈದ್ಯಾಧಿಕಾರಿಗಳ ಸಭೆ ನಡೆಸಿದ ಸಚಿವರು, ಆಸ್ಪತ್ರೆಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಆದುದರಿಂದ ಬಡರೋಗಿಗಳಿಗೆ ಉತ್ತಮ ಸೇವೆ ನೀಡುವ ಮೂಲಕ ಜನರ ವಿಶ್ವಾಸ ಗಳಿಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.
ಶಾಸಕ ಪ್ರಮೋದ್ ಮಧ್ವರಾಜ್, ನಗರಸಭೆ ಅಧ್ಯಕ್ಷ ಪಿ.ಯುವರಾಜ್, ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ, ಪೌರಾಯುಕ್ತ ಮಂಜುನಾಥಯ್ಯ,ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ, ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.