ಉಡುಪಿ: ಸಂಭ್ರಮದ ಚೂರ್ಣೋತ್ಸವ
ಉಡುಪಿ, ಜ.15: ಉಡುಪಿ ಶ್ರೀಕೃಷ್ಣ ಮಠದ ವಾರ್ಷಿಕ ಜಾತ್ರೋತ್ಸವ ಎಂದೇ ಕರೆಯಲಾಗುವ ಪರ್ಯಾಯ ಕಾಣಿಯೂರು ಶ್ರೀವಿದ್ಯಾವಲ್ಲಭ ತೀರ್ಥರ ನೇತೃತ್ವದಲ್ಲಿ ಕಳೆದೊಂದು ವಾರದಿಂದ ಸಾಂಪ್ರದಾಯಿಕ ರೀತಿಯಲ್ಲಿ ನಡೆದ ಸಪ್ತೋತ್ಸವ, ಇಂದು ಹಗಲಿನ ರಥೋತ್ಸವ ‘ಚೂರ್ಣೋತ್ಸವ’ದೊಂದಿಗೆ ಸಂಪನ್ನಗೊಂಡಿತು. ದ್ವೆತಮತ, ಮಧ್ವ ಸಿದ್ಧಾಂತದ ಪ್ರತಿಪಾದಕ ಶ್ರೀಮಧ್ವಾಚಾರ್ಯರು 800 ವರ್ಷಗಳ ಹಿಂದೆ ಮಕರ ಸಂಕ್ರಮಣದ ದಿನದಂದೇ ಉಡುಪಿಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆಂಬ ಪ್ರತೀ ಇರುವ ಹಿನ್ನೆಲೆಯಲ್ಲಿ ಪ್ರತೀ ವರ್ಷ ಇಲ್ಲಿ ಒಂದು ವಾರ ಕಾಲ ಸಪ್ತೋತ್ಸವವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು ರಾತ್ರಿ ಮೂರು ತೇರುಗಳ ಉತ್ಸವ ನಡೆದು ಮರುದಿನ ಹಗಲು ರಥೋತ್ಸವದೊಂದಿಗೆ ಇದು ಮುಕ್ತಾಯಗೊಳ್ಳುತ್ತದೆ.
ಪರ್ಯಾಯ ಕಾಣಿಯೂರು ಶ್ರೀಗಳಲ್ಲದೆ, ಜ.18ರಂದು ಅವರಿಂದ ಮುಂದಿನ ಎರಡು ವರ್ಷಗಳಿಗೆ ಶ್ರೀಕೃಷ್ಣ ಪೂಜಾ ಕೈಂಕರ್ಯವನ್ನು ಪಡೆಯಲಿರುವ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ರು, ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥರು, ಪಲಿಮಾರು ಮಠದ ಶ್ರೀವಿದ್ಯಾೀಶ ತೀರ್ಥರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು, ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರು, ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥರು, ಶೀರೂರು ಮಠದ ಶ್ರೀಲಕ್ಷ್ಮೀವರ ತೀಥರು ಇಂದಿನ ಚೂರ್ಣೋತ್ಸವದಲ್ಲಿ ಪಾಲ್ಗೊಂಡರು.