ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಕ್ತಾರ ನಿಧನ
ಮುಂಬೈ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸಹಾಯಕ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರ ಮುಹಮ್ಮದ್ ಅಬ್ದುಲ್ ರಹೀಂ ಖುರೇಷಿ ಗುರುವಾರ ಹೃದಯಾಘಾತದಿಂದ ನಿಧನರಾದರು.
ಅವರಿಗೆ 81 ವರ್ಷ ವಯಸ್ಸಾಗಿತ್ತು. 15 ದಿನ ಹಿಂದೆ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ಅವರ ಅಂತ್ಯಸಂಸ್ಕಾರದ ಪ್ರಾರ್ಥನೆ, ನಮಾಝ್-ಇ-ಜನಾಝಾ ಮೆಕ್ಕಾ ಮಸೀದಿಯಲ್ಲಿ ನಡೆಯಿತು.
ಇಸ್ಲಾಂ ಚಿಂತಕರಾದ ಖುರೇಷಿ, ಗಣಿತಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಬಳಿಕ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿ ಪಡೆದರು. ಹೈದರಾಬಾದ್‌ನಲ್ಲಿ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಸ್ವಲ್ಪ ಕಾಲ ಉದ್ಯೋಗದಲ್ಲಿದ್ದ ಅವರು, 1980ರಲ್ಲಿ ಸ್ಥಾಪನೆಯಾದ ಪ್ರಗತಿಪರ ಸಾಂಸ್ಕೃತಿಕ ಸಂಘಟನೆಯಾದ, ತಮೀರ್-ಇ- ಮಿಲ್ಲತ್ ಸೇರಿದ್ದರು. 1971ರಿಂದೀಚೆಗೆ ಎಐಎಂಪಿಎಲ್‌ಬಿ ಸದಸ್ಯರಾಗಿದ್ದಾರೆ.
ಮುಸ್ಲಿಂ ಸಮುದಾಯದ ಶಿಕ್ಷಣ ಹಾಗೂ ವೃತ್ತಿಪರ ಸಬಲೀಕರಣಕ್ಕೆ ಶ್ರಮಿಸುವ ತಮೀರ್-ಇ- ಮಿಲ್ಲತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.