ಫೆ.27: ಸಹ್ಯಾದ್ರಿ ಕಾಲೇಜಿನಲ್ಲಿ ಪಿಎಂಕೆವಿವೈ ಉದ್ಯೋಗ ಶಿಬಿರ
ಮಂಗಳೂರು, ಜ.15: ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ (ಪಿಎಂಕೆವಿವೈ) ಫೆ.27ರಂದು ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಉದ್ಯೋಗ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಶುಕ್ರವಾರ ತಿಳಿಸಿದ್ದಾರೆ.
ಇದು ಉದ್ಯೋಗ ಮೇಳ ಅಲ್ಲ. ಉದ್ಯೋಗಾರ್ಥಿಗಳಿಗೆ ಉದ್ಯೋಗ ಒದಗಿಸುವ ಉದ್ಯೋಗ ಖಾತ್ರಿಯ ಶಿಬಿರವಾಗಿದೆ. ಈಗಾಗಲೇ 50 ಕಂಪೆನಿಗಳು ಹೆಸರು ನೋಂದಾಯಿಸಿದ್ದು, 2 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಲಿದೆ. ಇನ್ನೂ 25ಕ್ಕೂ ಅಕ ಕಂಪೆನಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. 18ರಿಂದ 35 ವರ್ಷದೊಳಗಿನ ಯುವಕರಿಗೆ ಅವರ ಶಿಕ್ಷಣಕ್ಕನುಗುಣವಾಗಿ ಉದ್ಯೋಗ ದೊರೆಯಲಿದೆ. ಡಿಪ್ಲೊಮಾ, ಪದವಿ ಹೀಗೆ ವಿವಿಧ ಕೋರ್ಸು ಮಾಡಿದವರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡುವ ಮೂಲಕ ಉದ್ಯೋಗ ಒದಗಿಸುವ ಕೆಲಸವನ್ನು ಕಂಪೆನಿಗಳು ಮಾಡಲಿವೆ. ಮಂಗಳೂರಿನಲ್ಲಿ ರೂಮಾನ್ ಟೆಕ್ನಾಲಜೀಸ್ ಸಂಸ್ಥೆ ಪಿಎಂಕೆವಿವೈ ಅನುಷ್ಠಾನದ ಹೊಣೆ ಹೊತ್ತಿವೆ ಎಂದು ಸಂಸದರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯಂತೆ ಈ ಯೋಜನೆ ಕಳೆದ ವರ್ಷ ದೇಶಾದ್ಯಂತ ಆರಂಭವಾಗಿದೆ. ಎನ್‌ಜಿಒ ಸಂಸ್ಥೆಗಳಿಗೆ ಅನುಷ್ಠಾನದ ಜವಾಬ್ದಾರಿಯನ್ನು ಆಯಾ ಜಿಲ್ಲೆಗಳಲ್ಲಿ ಹಂಚಲಾಗಿದೆ. ಜಿಲ್ಲೆಯ ಅರ್ಹ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಉದ್ಯೋಗಕ್ಕೆ ಸಜ್ಜುಗೊಳಿಸುವ ಕೆಲಸವನ್ನು ಈ ಸಂಸ್ಥೆಗಳು ಮಾಡಲಿವೆ. ದ.ಕ.ಜಿಲ್ಲೆಯಲ್ಲಿ ರೂಮಾನ್ ಟೆಕ್ನಾಲಜೀಸ್ ಸಂಸ್ಥೆ ತರಬೇತಿ ನೀಡುವ ಕಾರ್ಯ ಮಾಡುತ್ತಿದೆ ಎಂದವರು ವಿವರಿಸಿದರು.
ರೂಮಾನ್ ಸಂಸ್ಥೆಯ ಮುಖ್ಯಸ್ಥ ಮನೀಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲ್ಲಿ ಅರ್ಹ ಉದ್ಯೋಗಾಕಾಂಕ್ಷಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡಿ ಉದ್ಯೋಗ ಒದಗಿಸುವ ಕೆಲಸವನ್ನು ಸಂಸ್ಥೆ ಮಾಡಲಿದೆ ಎಂದರು.
ರೂಮಾನ್ ಸಂಸ್ಥೆಯ ಘಟಕ ಮುಖ್ಯಸ್ಥ ಪ್ರಕಾಶ್ ಕೋಟ್ಯಾನ್, ಉಪಾಧ್ಯಕ್ಷ ವಿಕ್ರಮ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇಂದು ‘ವೃತ್ತ’ ಉದ್ಘಾಟನೆ ಮೂಡುಬಿದಿರೆ, ಜ.15: ರಾಜಸ್ತಾನದ ಗಂಗಾನಗರದಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ಜ.2ರಂದು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದ ಬಡಗ ಎಡಪದವು ಗ್ರಾಮದ ಉರ್ಕಿಯ ದಿ. ಈಶ್ವರ ಪೂಜಾರಿಯ ಪುತ್ರ ಗಿರೀಶ್ ಪೂಜಾರಿ (35) ಅವರ ಸ್ಮರಣಾರ್ಥ ಸ್ಥಳೀಯರ ಸಹಕಾರದಲ್ಲಿ ಮಿಜಾರು ಉರ್ಕಿಪದವು ಎಂಬಲ್ಲಿ ನಿರ್ಮಾಣಗೊಂಡ ’ಹವಾಲ್ದಾರ್ ಗಿರೀಶ್ ಪೂಜಾರಿ ವೃತ್ತ’ ಜ.16ರಂದು ಸಂಜೆ ಉದ್ಘಾಟನೆಗೊಳ್ಳಲಿದೆ.