×
Ad

ಮಾನವೀಯತೆ ಕಳೆದುಕೊಂಡಾಗ ಮಾನವ ಹಕ್ಕು ಉಲ್ಲಂಘನೆ: ನ್ಯಾ. ಸಂತೋಷ್ ಹೆಗ್ಡೆ

Update: 2016-01-16 16:39 IST

ಮಂಗಳೂರು, ಜ. 16: ಮನುಷ್ಯನಿಗೆ ತೃಪ್ತಿ ಇಲ್ಲದಿರುವುದರಿಂದ ದುರಾಸೆ ಹೆಚ್ಚಾಗಿ ಅದರಿಂದ ಪ್ರಲೋಭನೆಗೆ ಒಳಗಾಗಿ ಮನುಷ್ಯ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳುತ್ತಾನೆ. ಹೆಚ್ಚು ಗಳಿಸುವ ಉದ್ದೇಶದಿಂದ ಮಾನವೀಯತೆಯನ್ನು ಕಳೆದುಕೊಂಡು ಮಾನವ ಹಕ್ಕು ಉಲ್ಲಂಘನೆ ಕೃತ್ಯ ನಡೆಸುತ್ತಾನೆ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ವಿಶ್ಲೇಷಿಸಿದ್ದಾರೆ.

ಅವರು ಇಂದು ಬಾಂಧವ್ಯ ಒಕ್ಕೂಟ ಮಂಗಳೂರು ಇದರ ದಶಮಾನೋತ್ಸವ ಪ್ರಯುಕ್ತ ನಡೆದ ಮಾನವ ಹಕ್ಕುಗಳ ಶಾಂತಿ ಜಾಥಾ ಮತ್ತು ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ದುರಾಸೆ ಮತ್ತು ಅಮಾನವೀಯದಿಂದ ಆಗುವ ಮಾನವ ಹಕ್ಕು ಉಲ್ಲಂಘನೆ ಇತರೆಲ್ಲಾ ಉಲ್ಲಂಘನೆಗಳಿಗಿಂತ ಹೆಚ್ಚಿನ ಪರಿಣಾಮ ಉಂಟು ಮಾಡುತ್ತದೆ. ಹಾಗಾಗಿ ಮನುಷ್ಯನಿಗೆ ತೃಪ್ತಿ ಮತುತ ಮಾನವೀಯತೆ ಅತೀ ಅಗತ್ಯ ಎಂದರು.

ದಿಕ್ಸೂಚಿ ಭಾಷಣ ಮಾಡಿದ ಶಾಸಕ ಜೆ. ಆರ್. ಲೋಬೊ ಮಾತನಾಡಿ, ಸಮಾಜದಲ್ಲಿ ಧರ್ಮಾಧಾರಿತ ಮತ್ತು ಭ್ರಷ್ಟಾಚಾರದಿಂದಾಗಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಕೋಮು ಸಾಮರಸ್ಯ ಕಾಪಾಡುವುದರ ಜೊತೆಗೆ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಛಲವನ್ನು ಬೆಳೆಸಬೇಕು ಎಂದರು.

ಮಂಗಳೂರು ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಫಾ. ಅಲೋಶಿಯಸ್ ಪಾವ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಮಾನವ ಹಕ್ಕುಗಳ ಉಪನ್ಯಾಸಕಿ ಶೈಲಜಾ ಸಂತೋಷ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಬಾಂಧ್ಯವ್ಯ ಒಕ್ಕೂಟದ ಸಹ ಸಂಚಾಲಕಿ ಸಿಸ್ಟರ್ ಫಿಲೋಮಿನಾ ಸೆರಾವೊ ಉಪಸ್ಥಿತರಿದ್ದರು.

ಒಕ್ಕೂಟದ ಕಾರ್ಯದರ್ಶಿ ಫಾ. ಓಸ್ವಲ್ಡ್ ಮೊಂತೇರೊ ಪ್ರಸ್ತಾವನೆಗೈದರು. ಸಂಚಾಲಕ ವಿನೋದ್ ಮಸ್ಕರೇನಸ್ ಸ್ವಾಗತಿಸಿದರು.ಕಾರ್ಯಕ್ರಮಕ್ಕೂ ಮುನ್ನ ಮಿಲಾಗ್ರಿಸ್ ಚರ್ಚ್ ಮೈದಾನದಿಂದ ಬೆಂದೂರ್ ಸೈಂಟ್ ಆ್ಯಗ್ನೆಸ್ ಸ್ಪೆಷಲ್ ಸ್ಕೂಲ್‌ವರೆಗೆ ಜಾಥಾ ನಡೆಯಿತು. ಜಾಥಾವನ್ನು ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್ ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News