ಬೆಳ್ತಂಗಡಿ ವೃದ್ಧ ದಂಪತಿ ಕೊಲೆ ಪ್ರಕರಣ ದರೋಡೆಗಾಗಿ ಕೊಲೆ ಪ್ರಾಥಮಿಕ ತನಿಖೆಯಿಂದ ಪತ್ತೆ: ಎಸ್ಪಿ
ಬಾಲಪರಾಧಿಯೂ ಆಗಿದ್ದ ಆರೋಪಿ 15 ಪ್ರಕರಣಗಳಲ್ಲಿ ಭಾಗಿ!
ಮಂಗಳೂರು, ಜ.16: ಬೆಳ್ತಂಗಡಿ ತಾಲೂಕಿನಲ್ಲಿ ಜ. 10ರಂದು ನಡೆದ ವೃದ್ಧ ದಂಪತಿಯ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಗದಗ ಮೂಲದ ರವಿ ಯಾನೆ ರಾಜು ಕಾಟುಣ್ಣವರ್ (26), ದರೋಡೆ ಮಾಡುವ ಉದ್ದೇಶದಿಂದಲೇ ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಮೂಲತಃ ಗದಗ ಜಿಲ್ಲೆಯ ಕಲ್ಲವಡ್ಡರ ನಿವಾಸಿಯಾಗಿರುವ ಬಂಧಿತ ಆರೋಪಿಯ ಪ್ರಾಥಮಿಕ ತನಿಖೆಯ ವೇಳೆ ಆತ ಈಗಾಗಲೇ ಹುಬ್ಬಳ್ಳಿ ಮತ್ತು ಗದಗ ಸೇರಿದಂತೆ ಹಲವು ಕಡೆ 15ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಎಂಟು ಪ್ರಕರಣಗಳಲ್ಲಿ ನ್ಯಾಯಾಲಯದ ದಸ್ತಗಿರಿ ವಾರಂಟ್ ಇದೆ ಎಂದು ಡಾ. ಶರಣಪ್ಪ ತಿಳಿಸಿದರು.
ಆರೋಪಿಯು ಬಾಲಾಪರಾಧಿಯಾದ್ದು, ಬಾಲ್ಯದಿಂದಲೇ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವುದು ತನಿಖೆ ವೇಳೆ ಬಯಲಾಗಿದೆ. ಇನ್ನಷ್ಟು ಮಾಹಿತಿಯನ್ನು ಕಲೆ ಹಾಕಲಾಗುತ್ತಿದ್ದು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಕೇಳಲಾಗಿದೆ. ಆರೋಪಿಯು ಜ.10ರಂದು ನೀರು ಕೇಳುವ ನೆಪದಲ್ಲಿ ಕಕ್ಕಿಂಜೆಯ ವೃದ್ಧ ದಂಪತಿಯಾದ ಕೆ.ವಿ.ಕರ್ಕಿ(80) ಹಾಗೂ ಅವರ ಪತ್ನಿ ಎಲಿಕುಟ್ಟಿ(72)ಯವರನು ಕೊಲೆ ಮಾಡಿ ಅವರ ಮೈ ಮೇಲೆ ಇದ್ದ ಒಡವೆಗಳನ್ನು, ಮನೆಯಲ್ಲಿದ್ದ ಬೆಲೆಬಾಳುವ ಸೊತ್ತುಗಳನ್ನು ದೋಚಿಕೊಂಡು ಹೋಗಿದ್ದ. ಪ್ರಕರಣವನ್ನು ವಿಶೇಷ ತಂಡ ರಚಿಸುವ ಮೂಲಕ ಸಮಗ್ರ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಡಾ. ಶರಣಪ್ಪ ತಿಳಿಸಿದರು.
ಇದೇ ಸಂದರ್ಭ ತನಿಖೆಯನ್ನು ಯಶಸ್ವಿಯಾಗಿ ನಡೆಸಿ ಆರೋಪಿಯನ್ನು ಬಂಧಿಸಿದ ತನಿಖಾ ತಂಡವನ್ನು, ಹಾಗೂ ಸಹಕರಿಸಿದ ಸಿಬ್ಬಂದಿಗಳನ್ನು ಎಸ್ಪಿಯವರು ಪ್ರಶಂಸಾ ಪತ್ರ ನೀಡಿ ಗೌರವಿಸಿದರು.
ಹೆಚ್ಚುವರಿ ಪೊಲೀಸ್ ಅಧೀೀಕ್ಷಕ ವಿನ್ಸೆಂಟ್ ಶಾಂತಕುಮಾರ್, ಬಂಟ್ವಾಳ ಎಎಸ್‌ಪಿ ರಾಹುಲ್ ಕುಮಾರ್, ಬೆರಳಚ್ಚು ವಿಭಾಗದ ಡಿಎಸ್‌ಪಿ ಎ.ಸಿ.ಗಿರೀಶ್, ಬೆಳ್ತಂಗಡಿ ಸಿಪಿಐ ಬಿ.ಆರ್.ಲಿಂಗಪ್ಪ, ಪಿಎಸ್‌ಐ ಸಂದೇಶ್ ಪಿ.ಜಿ., ಸಿಬ್ಬಂದಿಗಳಾದ ತೋಮಸ್, ಹರೀಶ್, ಎಸ್‌ಐ, ಕಲೈಮಾರ್, ವೆಂಕಟೇಶ್ ನಾಯ್ಕಾ, ಡಿಸಿಐಬಿ ಇನ್‌ಸ್ಪೆಕ್ಟರ್ ಅಮಾನುಲ್ಲ, ಎಎಸ್‌ಐ ಸಂಜೀವ ಪುರುಷ ಮತ್ತು ಸಿಬ್ಬಂದಿಗಳಾದ ಉದಯ ರೈ, ಪಳನಿವೇಲು, ಇಕ್ಬಾಲ್, ತಾರಾನಾಥ್ ಎಸ್. ವಾಸು ನಾಯ್ಕಾ, ವಿಜಯ ಗೌಡ ಮೊದಲಾವದರಿಗೆ ಪ್ರಶಂಸಾ ಪತ್ರವನ್ನು ಈ ಸಂದರ್ಭ ವಿತರಿಸಲಾಯಿತು.