×
Ad

ಬೆಳ್ತಂಗಡಿ: ಸಮುದಾಯ ಬಾನುಲಿ ಕೇಂದ್ರ, 90.4 ತರಂಗಾಂತರದಲ್ಲಿ ನಿನಾದ ಶನಿವಾರ ಕಾರ್ಯಾರಂಭ

Update: 2016-01-16 17:18 IST

ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಮುದಾಯ ಬಾನುಲಿ ಕೇಂದ್ರ, 90.4 ತರಂಗಾಂತರದಲ್ಲಿ ನಿನಾದ ಶನಿವಾರ ಕಾರ್ಯಾರಂಬಿಸಿತು. ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆಯವರು ಉದ್ಘಾಟಿಸಿದರು.
 ಸಬೆಯನ್ನು ಉದ್ದೇಶಿಸಿ ಮಾತನಾಡಿದ ಇವರು ನಾವು ಇಂದು ಮಾಹಿತಿ ಯುಗದಲ್ಲಿದ್ದೇವೆ. ಅನಕ್ಷರಸ್ಥರಿಗೂ, ಗ್ರಾಮೀಣ ಪ್ರದೇಶದವರಿಗೂ ಸಹ ಮಾಧ್ಯಮಗಳ ಮೂಲಕ ದೇಶ- ವಿದೇಶಗಳ ಸುದ್ದಿ ತಲುಪುತ್ತಿದೆ. ಹಿಂದಿನ ಕಾಲದಲ್ಲಿ ಮನೆಯ ಯಜಮಾನರು ಕಾಫಿ ಕುಡಿಯುತ್ತಾ ರೇಡಿಯೋದಲ್ಲಿ ನ್ಯೂಸ್ ಕೇಳ್ತಾ ಇದ್ರೆ, ಮಕ್ಕಳು ಹಿಂದಿ ಚಿತ್ರಗೀತೆ, ಮನೆಯ ಮಹಿಳೆಯರು ಅಡುಗೆ ಕಾರ್ಯಕ್ರಮಗಳನ್ನು ಕೇಳಲು ಹವಣಿಸುತಿದ್ದರು. ಈಗ ಮತ್ತೆ ರೇಡಿಯೋ ಕಾರ್ಯಕ್ರಮಗಳು ಜನಪ್ರಿಯವಾಗುತ್ತಿದೆ ಎಂದರು.

ನಮ್ಮ ರೇಡಿಯೋ ಕೇಂದ್ರದಲ್ಲಿ ಕಾಲೇಜಿನ ಕೋರ್ಸ್‌ಗಳು, ಸಾಧನೆಗಳ ಬಗ್ಗೆ, ಪ್ರವಾಸಿ, ಧಾರ್ಮಿಕ ಕೇಂದ್ರಗಳ ಮಾಹಿತಿ, ಕೃತಿ- ಕಾವ್ಯ ವಿಮರ್ಶೆಗಳನ್ನು ಬಿತ್ತರಿಸಬೇಕು. ನಮ್ಮ ಸಂಸ್ಕೃತಿಯನ್ನು ಪಸರಿಸುವ ಕಾರ್ಯವಾಗಬೇಕು ಎಂದು ಹೇಳಿದರು. ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಪ್ರತಿಭೆಗಳಿರುತ್ತವೆ ಅದನ್ನು ಹೊರತೆಗೆಯಬೇಕು ಎಂದು ತಿಳಿಸಿದರು. ಧ.ಮಂ.ಶಿ. ಸಂಸ್ಥೆ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಮಾತನಾಡಿ, ಛಲ ಬಿಡದ ತ್ರಿವಿಕ್ರಮನಂತೆ ಕೆಲಸ ಮಾಡಿದ್ದರಿಂದ ಇಂದು ಬಾನುಲಿ ಕೇಂದ್ರ ಉದ್ಘಾಟನೆಗೊಂಡಿದೆ. ಇತರ ಕೆಲಸಗಳೊಂದಿಗೆ ಮಾಹಿತಿ, ಸುದ್ದಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುವ ಏಕೈಕ ಮಾಧ್ಯಮ ರೇಡಿಯೋ. ಎಲ್ಲರೂ ಇದರ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಎಸ್. ಮೋಹನನಾರಾಯಣ. ಶ್ರೀಮತಿ ಸೋನಿಯಾ ಯಶೋವರ್ಮ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಭಾಸ್ಕರ್ ಹೆಗ್ಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತೃತೀಯ ಬಿ.ಎ. ವಿದ್ಯಾರ್ಥಿ ಪ್ರಶಾಂತ್ ದಿಡುಪೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News