ಗೋಹತ್ಯೆಯನ್ನು ನಮ್ಮ ಮೇಲೆ ಗುರಿಯಿರಿಸಲು ಬಳಸಲಾಗಿದೆ: ಟೀಂ ಇಂಡಿಯಾ ವೇಗಿ ಶಮಿ ತಂದೆ
ಮೀರತ್, ಜ.16: ಗೋಹತ್ಯೆಯ ಆರೋಪದ ಮೇಲೆ ಬಂಧಿಸಲಾಗಿದ್ದ ಕೆಲವು ವ್ಯಕ್ತಿಗಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ, ಅವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಭಾರತದ ವೇಗಿ ಮುಹಮ್ಮದ್ ಶಮಿಯವರ ಸೋದರ ಮುಹಮ್ಮದ್ ಹಸಿಬ್‌ರ ವಿರುದ್ಧ ನಿನ್ನೆ ಪ್ರಕರಣ ದಾಖಲಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಅದರ ಮರುದಿನವೇ ಕ್ರಿಕೆಟಿಗನ ತಂದೆ ತೌಸೀಫ್ ಅಹ್ಮದ್, ತನ್ನ ಕುಟುಂಬ ‘ಅಪಾಯದಲ್ಲಿದ್ದು’ ಭಾವನಾತ್ಮಕ ವಿಷಯವಾಗಿರುವ ಗೋಹತ್ಯೆಯನ್ನು ತಮ್ಮ ಮೇಲೆ ಗುರಿಯಿಡಲು ಬಳಸಲಾಗುತ್ತಿದೆಯೆಂದು ಆರೋಪಿಸಿದ್ದಾರೆ.
ಘಟನೆಯ ವೇಳೆ ತನ್ನ ಮಗ ಅಲ್ಲಿರಲೇ ಇಲ್ಲ. ಬಹಳ ತಡವಾಗಿ ಸ್ಥಳಕ್ಕೆ ತಲುಪಿದ್ದನು. ಹಸೀಬ್, ಅಲ್ಲಿ ಸೇರಿದ್ದ ಇತರ ಅನೇಕರಂತೆ ಕೇವಲ ಪ್ರೇಕ್ಷಕನಾಗಿದ್ದನು. ಆತನನ್ನು ಅನಗತ್ಯವಾಗಿ ವಿವಾದದಲ್ಲಿ ಎಳೆಯಲಾಗಿದೆ. ಶಮಿ, ಟೀಂ ಇಂಡಿಯಗಾಗಿ ಆಡಲು ತೊಡಗಿದ ಮೇಲೆ ತಮಗೆ ದೊರಕಿರುವ ಪ್ರಚಾರದ ಕಾರಣದಿಂದಾಗಿ ಕೆಲವು ವ್ಯಕ್ತಿಗಳು ತಮ್ಮ ಕುಟುಂಬದ ಮೇಲೆ ದ್ವೇಷ ಬೆಳೆಸಿಕೊಂಡಿರುವುದರಿಂದಾಗಿ ಹೀಗಾಗಿದೆ. ಈ ವಿಚಾರವನ್ನು ತಾನು ಒಂದು ತಿಂಗಳ ಹಿಂದೆಯೇ ಜಿಲ್ಲಾ ದಂಡಾಧಿಕಾರಿಗೆ ವರದಿ ಮಾಡಿದ್ದೆ. ಈ ಬಂಧನ ಅದರ ಫಲಿತಾಂಶವಾಗಿದೆ. ‘ಗೋವಧೆ’ ಎಂಬ ಶಬ್ದವನ್ನು ತಮ್ಮ ಮೇಲೆ ಗುರಿಯಿಡಲು ಬಳಸಲಾಗುತ್ತಿದೆಯೆಂದು ಅವರು ದೂರಿದ್ದಾರೆ.
ಟಿಒಐ ಅಮ್ರೋಹಾ ಜಿಲ್ಲಾ ದಂಡಾಧಿಕಾರಿ ವೇದಪ್ರಕಾಶ್‌ರನ್ನು ಸಂಪರ್ಕಿಸಿದಾಗ, ಅಹ್ಮದ್, ತನ್ನನ್ನು ಒಂದು ತಿಂಗಳ ಹಿಂದೆ ಭೇಟಿಯಾಗಿದ್ದುದನ್ನು ಖಚಿತಪಡಿಸಿದ್ದಾರೆ.
ಕೆಲವರು ದೂರವಾಣಿಯಲ್ಲಿ ತನ್ನ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾರೆಂಬ ದೂರಿನೊಂದಿಗೆ ಅವರು ತನ್ನನ್ನು ಭೇಟಿಯಾಗಿದ್ದುದು ಸತ್ಯ ಆದರೆ, ಬೆದರಿಕೆ ಹಾಕಿದವರು ಯಾರೆಂಬುದನ್ನು ಅವರು ಉಲ್ಲೇಖಿಸಿರಲಿಲ್ಲವೆಂದು ಅವರು ತಿಳಿಸಿದ್ದಾರೆ.
ಗೋವಧೆಯ ಸಂಬಂಧ ಬೇಕಾಗಿದ್ದ ಒಬ್ಬ ವ್ಯಕ್ತಿಯ ಕುರಿತಾತಿ ಗುರುವಾರ ಅಪರಾಹ್ಣ ದಿಡೋಲಿ ಪೊಲೀಸ್ ಠಾಣೆಯ ಅಧಿಕಾರಿ ಪ್ರವೀಣ್‌ಕುಮಾರ್‌ಗೆ ಮಾಹಿತಿಯೊಂದು ದೊರೆತಿತ್ತು. ಕುಮಾರ್ ನೇತೃತ್ವದ ತಂಡ ಆ ವ್ಯಕ್ತಿಯನ್ನು ಬಂಧಿಸಲೆಂದು ಹೋದಾಗ, ಹಸೀಬ್, ಪೊಲೀಸರ ಕರ್ತವ್ಯಕ್ಕೆ ತಡೆಯೊಡ್ಡಿದ್ದರು. ಅಲ್ಲದೆ ಸಬ್‌ಇನ್‌ಸ್ಪೆಕ್ಟರ್ ಪ್ರದೀಪ್ ಭಾರದ್ವಾಜರೊಂದಿಗೆ ಜಗಳಾಡಿ, ಅವರ ಸಮವಸ್ತ್ರವನ್ನೂ ಹರಿದಿದ್ದರು.
ಈ ಗೊಂದಲದಲ್ಲಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು. ಬಳಿಕ ಪೊಲೀಸರು ಹಸೀಬ್‌ರನ್ನು ಬಂಧಿಸಿ, ಅವರ ವಿರುದ್ಧ ಆರೋಪ ದಾಖಲಿಸಿದ್ದರು.
ಗೋವಧೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ, ರಿಜ್ವಾನ್ ಅಹ್ಮದ್ ಎಂಬಾತನನ್ನು ಒಯ್ಯುತ್ತಿದ್ದ ಪೊಲೀಸ್ ವಾಹನವನ್ನು ಹಸೀಬ್ ತಡೆದರು. ಸಬ್‌ಇನ್‌ಸ್ಪೆಕ್ಟರ್ ಹಾಗೂ ಕಾನ್‌ಸ್ಟೇಬಲ್‌ಗಳು ಅವರನ್ನು ಎದುರಿಸಿದಾಗ, ಹಸೀಬ್ ವ್ಯಗ್ರರಾದರು. ತಾವು ಹಸೀಬ್ ವಿರುದ್ಧ ಐಪಿಸಿ ಸೆ.147(ದಂಗೆ), 148(ಮಾರಕಾಸ್ತ್ರ ಧರಿಸಿ ದಂಗೆ), 153(ವಿಭಿನ್ನ ಗುಂಪುಗಳ ನಡುವೆ ದ್ವೇಷಕ್ಕೆ ಪ್ರಚೋದನೆ), 332(ಸಾರ್ವಜನಿಕ ಸೇವಕರು ಕರ್ತವ್ಯ ನಡೆಸದಂತೆ ಸ್ವ ಇಚ್ಛೆಯಿಂದ ನೋವುಂಟು ಮಾಡುವುದು) ಹಾಗೂ 224(ತನ್ನ ಕಾನೂನು ಬದ್ಧ ಬಂಧನಕ್ಕೆ ಪ್ರತಿರೋಧ ಅಥವಾ ತಡೆಯೊಡ್ಡುವುದು) ಅನ್ವಯ ಎಫ್‌ಐಆರ್ ದಾಖಲಿಸಿದ್ದೇವೆ. ಆದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ಮಂಜೂರಾಗಿದೆಯೆಂದು ಕುಮಾರ್ ಪ್ರಕರಣದ ಬಗ್ಗೆ ವಿವರಿಸಿದ್ದಾರೆ.