ಕೊಡಲಿ ಹಿಡಿದು ಬಯಲಾಟಕ್ಕೆ ನುಗ್ಗಿದ ಮಾನಸಿಕ ಅಸ್ವಸ್ಥ!
Update: 2016-01-16 23:05 IST
ಬಂಟ್ವಾಳ, ಜ. 16: ಪಾಣೆಮಂಗಳೂರು ಎಸ್‌ವಿಎಸ್ ಶಾಲೆಯ ಮೈದಾನದಲ್ಲಿ ಶುಕ್ರವಾರ ರಾತ್ರಿ ನಡೆಯುತ್ತಿದ್ದ ಕಟೀಲು ಮೇಳದ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಕೊಡಲಿ ಹಿಡಿದುಕೊಂಡು ವೇದಿಕೆ ಮುಂಭಾಗಕ್ಕೆ ನುಗ್ಗಿ ಬಂದು ರುದ್ರ ನರ್ತನ ಮಾಡಿದ್ದು, ಸಭೆಯಲ್ಲಿ ಇದ್ದವರು ಚೆಲ್ಲಾಪಿಲ್ಲಿಯಾಗಿ ಓಡಿದ ಘಟನೆ ನಡೆದಿದೆ.
ಮಾನಸಿಕ ಅಸ್ವಸ್ಥನನ್ನು ಬಿ.ಮೂಡ ಗ್ರಾಮ ಮಠ ನಿವಾಸಿ ಯೋಗೀಶ ಕುಲಾಲ್ ಎಂದು ಗುರುತಿಸಲಾಗಿದೆ. ಈತನ ಉಪಟಳ ತಾಳಲಾರದೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಬಂದ ಪೊಲೀಸ್ ಸಿಬ್ಬಂದಿಯನ್ನು ಕಂಡಾಗ ಈತ ಕೊಡಲಿ ಬೀಸಲು ಆರಂಭಿಸಿದ್ದು, ಸ್ಥಳೀಯ ಯುವಕರು ಆತನನ್ನು ಸ್ಥಳದಿಂದ ದೂರಕ್ಕೆ ಕರೆದೊಯ್ದರು. ಶನಿವಾರ ಆತನನ್ನು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ.